ಲಾಕ್‌ಡೌನ್ ಪರಿಣಾಮ 25% ಚಿಲ್ಲರೆ ವ್ಯಾಪಾರಿಗಳ ಅಸ್ತಿತ್ವಕ್ಕೆ ಸಂಚಕಾರ

ಹೊಸದಿಲ್ಲಿ, ಎ. 8: ಕೊರೋನ ವೈರಸ್ ಹರಡದಂತೆ ಕೈಗೊಂಡಿರುವ ನಿರ್ಬಂಧದ ಕ್ರಮವಾಗಿ ದೇಶದಾದ್ಯಂತ ಜಾರಿಗೊಂಡಿರುವ 21 ದಿನಗಳ ಲಾಕ್‌ಡೌನ್ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ಮಾರಕ ಪ್ರಹಾರ ಎಸಗಿದ್ದು 25%ದಷ್ಟು ಚಿಲ್ಲರೆ ವ್ಯಾಪಾರಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಭಾರತದ ಚಿಲ್ಲರೆ ವ್ಯಾಪಾರಿಗಳ ಸಂಘ(ಆರ್‌ಎಐ) ಕಳವಳ ವ್ಯಕ್ತಪಡಿಸಿದೆ.
ಆಹಾರೇತರ ಚಿಲ್ಲರೆ ವ್ಯಾಪಾರಿಗಳಿಗೆ ಲಾಕ್‌ಡೌನ್ ಸಂದರ್ಭ ಆದಾಯವೇ ಇರಲಿಲ್ಲ. ಆದರೂ ಅವರ ನಿಗದಿತ ವೆಚ್ಚ ಎಂದಿನಂತೆಯೇ ಮುಂದುವರಿದಿದೆ. ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದ್ದು ಸರಕಾರ ಬಂಡವಾಳದ ನೆರವು ಸಹಿತ ಸಹಾಯಕ್ಕೆ ಬರದಿದ್ದರೆ 25%ದಷ್ಟು ಚಿಲ್ಲರೆ ವ್ಯಾಪಾರಿಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಆರ್‌ಎಐಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ.
ಲಾಕ್‌ಡೌನ್ ಕೊನೆಗೊಂಡ ಬಳಿಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದ್ದರೆ 20%ದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಅನಿವಾರ್ಯತೆಯಿದೆ . ಕೆಲವು ಸಣ್ಣ ಚಿಲ್ಲರೆ ವ್ಯಾಪಾರಿಗಳು 30%ದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕಾಗುತ್ತದೆ ಎಂದು ರಾಜಗೋಪಾಲನ್ ಹೇಳಿದ್ದಾರೆ. ಸಂಘದ ಸದಸ್ಯರಾಗಿರುವ 768 ಸಂಘಟಿತ ಚಿಲ್ಲರೆ ವ್ಯಾಪಾರಿಗಳನ್ನು (ಸಣ್ಣ, ಮಧ್ಯಮ ಮತ್ತು ದೊಡ್ಡ ವ್ಯಾಪಾರಿಗಳು) ಸಮೀಕ್ಷೆಗೆ ಒಳಪಡಿಸಿದ್ದು ಇವರಲ್ಲಿ 51%ದಷ್ಟು ಸದಸ್ಯರು ಪರಿಸ್ಥಿತಿ ಸುಧಾರಿಸಲು 6ರಿಂದ 12 ತಿಂಗಳು ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರೆ, 24%ದಷ್ಟು ಸದಸ್ಯರು 3ರಿಂದ 6 ತಿಂಗಳ ಅಗತ್ಯವಿದೆ ಎಂದಿದ್ದಾರೆ.
ಆಗಸ್ಟ್ ತಿಂಗಳಿನವರೆಗೆ ಲಾಭದ ಮಾತೇ ಇಲ್ಲ ಎಂದು 80% ಸದಸ್ಯರು ಹೇಳಿದ್ದರೆ, ಆಹಾರೇತರ ಕ್ಷೇತ್ರದ ಚಿಲ್ಲರೆ ವ್ಯಾಪಾರಿಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ 40% ಲಾಭ ನಿರೀಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸಮೀಕ್ಷೆ ನಡೆಸಿದವರಲ್ಲಿ 18%ದಷ್ಟು ಆಹಾರ ಕ್ಷೇತ್ರದ ಚಿಲ್ಲರೆ ವ್ಯಾಪಾರಿಗಳಿದ್ದು ಇವರು ಲಾಕ್‌ಡೌನ್ ಇದ್ದರೂ ತಮ್ಮ ಕೆಲಸ ಮುಂದುವರಿಸಿದ್ದಾರೆ. ಉಳಿದವರು ಬಾಗಿಲು ಹಾಕುವ ಅನಿವಾರ್ಯತೆ ಎದುರಾಗಿದೆ. ಮಾಲ್‌ನ ಮಾಲಕರು ಲಾಕ್‌ಡೌನ್ ಅವಧಿಯ ಬಾಡಿಗೆ ಮನ್ನಾ ಮಾಡಲು ಒಪ್ಪಿದ್ದರೂ , ಕನಿಷ್ಟ 6ರಿಂದ 9 ತಿಂಗಳು ನಗದು ಹರಿವಿನ ಸಮಸ್ಯೆ ಮುಂದುವರಿಯುವ ಕಾರಣ ಇನ್ನಷ್ಟು ಕಡಿತದ ಅಗತ್ಯವಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.
ಚಿಲ್ಲರೆ ವ್ಯಾಪಾರಿಗಳ ಒಟ್ಟು ಖರ್ಚಿನಲ್ಲ ಸುಮಾರು 40%ದಷ್ಟು ಬಾಡಿಗೆ ವೆಚ್ಚ, 30%ದಷ್ಟು ಕೆಲಸಗಾರರ ಸಂಬಳ ಮತ್ತಿತರ ಖರ್ಚು ಮತ್ತು ಉಳಿದ ವೆಚ್ಚ ದಾಸ್ತಾನು ಇರಿಸುವುದಕ್ಕೆ ಸಂಬಂಧಿಸಿದ್ದಾಗಿದೆ.
ರೆಸ್ಟೊರೆಂಟ್‌ಗಳು, ಚಿಲ್ಲರೆ ವ್ಯಾಪಾರಿಗಳು ಹಾಗೂ ಸಿನೆಮಾ ಥಿಯೇಟರ್‌ಗಳಿಂದ ಬಾಡಿಗೆ ಮನ್ನಾ ಮಾಡಲು, ಬಾಡಿಗೆಯಲ್ಲಿ ರಿಯಾಯಿತಿ ನೀಡಬೇಕೆಂಬ ಬೇಡಿಕೆ ಬಂದಿದೆ. ಸರಕಾರ ಈ ಬಗ್ಗೆ ಗಮನ ಹರಿಸಲಿದೆ ಎಂಬ ವಿಶ್ವಾಸದಿಂದ ಕಾದು ನೋಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ದೇಶದ ಹಲವೆಡೆ ವ್ಯಾಪಾರಿ ಮಳಿಗೆಗಳನ್ನು ಹೊಂದಿರುವ ಸೆಲೆಕ್ಟ್ ಗ್ರೂಫ್‌ನ ಅಧ್ಯಕ್ಷ ಅರುಣ್ ಶರ್ಮ ಹೇಳಿದ್ದಾರೆ.
ಆದರೆ ಮಾಲ್‌ನ ಮಾಲಕರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಮಾಲ್‌ನ ಚಿಲ್ಲರೆ ಅಂಗಡಿಗಳ ಬಾಡಿಗೆ ಬ್ಯಾಂಕ್‌ನ ಸಾಲಕ್ಕೆ ಜಮೆ ಆಗುತ್ತದೆ. ಬಾಡಿಗೆ ಬರದಿದ್ದರೆ ಸಾಲದ ಕಂತು ಪಾವತಿ ಬಾಕಿಯಾಗಿ ಎನ್‌ಪಿಎ ಪಟ್ಟಿಗೆ ಸೇರ್ಪಡೆಯಾಗುತ್ತೇವೆ ಎಂದು ಮಾಲ್‌ಗಳ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಲಾಕ್‌ಡೌನ್ ಮುಕ್ತಾಯವಾಗಿ, ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದರೂ ಜನತೆ ಈ ಹಿಂದಿನಂತೆ ಖರೀದಿಗೆ ಮುಂದಾಗುವ ಸಾಧ್ಯತೆಯಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್‌ನಿಂದ ಸುದೀರ್ಘ ಅವಧಿಯಲ್ಲಿ ಮನೆಯಲ್ಲೇ ಉಳಿದ ಸಂದರ್ಭ, ಕಡಿಮೆ ವಸ್ತುಗಳಿದ್ದರೂ ಬದುಕಬಹುದು ಎಂಬುದನ್ನು ಜನತೆ ಮನಗಂಡಿದ್ದಾರೆ ಎಂದವರು ಹೇಳಿದ್ದಾರೆ.
ಜಿಎಸ್‌ಟಿ ರಿಯಾಯಿತಿಗೆ ಒತ್ತಾಯ
ಚಿಲ್ಲರೆ ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ರಿಯಾಯಿತಿ ಮತ್ತು ಅಂಗಡಿ ಮುಚ್ಚಿದ್ದರೂ ಕನಿಷ್ಟ ವಿದ್ಯುತ್ ಶುಲ್ಕ ಪಾವತಿಸಬೇಕು ಎಂಬ ಆದೇಶ ರದ್ದತಿಗೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಬಾಡಿಗೆಯನ್ನು ಮೊದಲೇ ನಿಗದಿಪಡಿಸುವ ಬದಲು ಆದಾಯದ ಆಧಾರದಲ್ಲಿ ಬಾಡಿಗೆ ಪ್ರಮಾಣ ನಿರ್ಧರಿಸಬೇಕು. ಮಾಲ್‌ನ ಮಾಲಕರಿಗೆ ಆಸ್ತಿ ತೆರಿಗೆ ಪಾವತಿಗೆ ನೀಡಿರುವ ತಾತ್ಕಾಲಿಕ ತಡೆಯ ಪ್ರಯೋಜನ ಚಿಲ್ಲರೆ ವ್ಯಾಪಾರಿಗಳಿಗೂ ದೊರಕಬೇಕು ಎಂದು ಚಿಲ್ಲರೆ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.







