ಬಯಲುಸೀಮೆ ಜಿಲ್ಲೆಗಳಿಗೆ ಸಾಲಮನ್ನಾ,ಪ್ಯಾಕೇಜ್ ನೀಡಿ: ವಿಧಾನಪರಿಷತ್ ಸದಸ್ಯ ಗೋವಿಂದರಾಜು
'ಲಾಕ್ ಡೌನ್‍ನಿಂದಾಗಿ ಸಂಕಷ್ಟದಲ್ಲಿ ರೈತರು,ಬಡ ವ್ಯಾಪಾರಿಗಳ ಬದುಕು'
ಕೋಲಾರ: ಕೋವಿಡ್-19 ಭಯಾನಕ ಸೋಂಕು ತಡೆಯಲು ಲಾಕ್ ಡೌನ್ ಘೋಷಿಸಿರುವುದರಿಂದ ಸಂಕಷ್ಟಕ್ಕೊಳಗಾಗಿರುವ ಬಯಲು ಸೀಮೆ ಜಿಲ್ಲೆಗಳ ರೈತರು, ಬೀದಿಬದಿ ಬಡ ವ್ಯಾಪಾರಿಗಳಿಗೆ ಸಾಲ ಮನ್ನಾ ಮತ್ತು ವಿಶೇಷ ಪರಿಹಾರ ಒದಗಿಸುವಂತೆ ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಖುದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಇತಿಹಾಸದಲ್ಲೇ ಕಂಡರಿಯದ ಸಂಕಷ್ಟಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ರೈತರು ಒಳಗಾಗಿದ್ದಾರೆ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ದುಷ್ಪರಿಣಾಮ ಬಡವರು,ಮಧ್ಯಮ ವರ್ಗದವರನ್ನು ತಲ್ಲಣಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಬರಪೀಡಿತ ಜಿಲ್ಲೆಗಳಾದ ಕೋಲಾರ,ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ,ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಮಾವಿನ ಬೆಳೆಗೆ ಮುಂದಿನ ದಿನಗಳಲ್ಲಿ ವಹಿವಾಟು ಯಾವ ಸ್ಥಿತಿ ತಲುಪುತ್ತದೆ ಎಂಬ ಆತಂಕವೂ ಜನರನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.
ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಜಿಲ್ಲೆಗಳಲ್ಲಿ ರೈತರು ಹಾಲು, ತರಕಾರಿ,ಹೂ,ಹಣ್ಣು, ರೇಷ್ಮೆ ಟಮೋಟೋ,ಮಾವಿಗೆ ಬೆಲೆ ಸಿಗದೇ ಸಂಕಷ್ಟ ಎದುರಿಸುತ್ತದ್ದಾರೆ, ಕೋವಿಡ್-19 ರಿಂದಾಗಿ ವಿದೇಶಗಳಿಗೆ ರಫ್ತು ಆಗದ ಕಾರಣ ರೈತರ ಪರಿಸ್ಥಿತಿ ಮತ್ತಷ್ಟು ಆತಂಕಕ್ಕೆ ಒಳಗಾಗಲಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಕೋರಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆ ಕೊಳೆಯುತ್ತಿದೆ, ಕೆಲವು ರೈತರು ತೋಟದಲ್ಲೇ ನಾಶಪಡಿಸಿರುವ ನಿದರ್ಶನಗಳು ಇವೆ, ರೇಷ್ಮೆ ಗೂಡು ಖರೀದಿಸುವವರಿಲ್ಲದೇ ಗೂಡು ಬೆಳೆದ ರೈತರ ಬದುಕು ಅತಂತ್ರವಾಗಿದೆ, ಜತೆಗೆ ಉತ್ಪಾದನೆಯೂ ಶೇ.20ಕ್ಕೆ ಕುಸಿದಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.
ಪಶು ಆಹಾರದ ಬೆಲೆ ಗಗನಕ್ಕೇರಿದ್ದು, ಹಸು ಸಾಕಾಣಿಕೆಯೂ ರೈತರಿಗೆ ಹೊರೆಯಾಗಿದೆ, ಹಾಲಿನ ಉತ್ಪಾದನೆ ಕುಸಿತಗೊಂಡಿರುವುದೇ ಇದಕ್ಕೆ ನಿದರ್ಶನ, ಇದರ ಜತೆಗೆ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಅಯೋಮಯವಾಗಿದೆ.
ಇದನ್ನೆಲ್ಲಾ ಗಮನಿಸಿ ಸರ್ಕಾರ ನೆರವಿಗೆ ಬರಬೇಕು, ಅವರ ಸಾಲ ಮನ್ನಾ ಮತ್ತು ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಅವರ ಬದುಕನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.







