ಇಟಲಿಯ ಒಲಿಂಪಿಯನ್ ಡೊನಾಟೊ ಸಬಿಯಾ ಕೊರೋನಕ್ಕೆ ಬಲಿ

ರೋಮ್, ಎ.8: ಎರಡು ಬಾರಿ ಒಲಿಂಪಿಕ್ಸ್‌ನ 800 ಮೀ. ಓಟದಲ್ಲಿ ಫೈನಲ್ ತಲುಪಿದ್ದ ಡೊನಾಟೊ ಸಬಿಯಾ ಕೋವಿಡ್-19 ಪಿಡುಗಿಗೆ ಬಲಿಯಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು ಎಂದು ಇಟಲಿಯ ಒಲಿಂಪಿಕ್ಸ್ ಸಮಿತಿ ಬುಧವಾರ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಸಬಿಯಾ ದಕ್ಷಿಣ ಇಟಲಿಯ ಪೊಟೆಂಝಾದ ಸ್ಯಾನ್ ಕಾರ್ಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಇಟಲಿಯ ಒಲಿಂಪಿಕ್ಸ್ ಸಮಿತಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ 800 ಮೀ. ಓಟದಲ್ಲಿ ಫೈನಲ್‌ಗೆ ತಲುಪಿ ಐದನೇ ಸ್ಥಾನ ಪಡೆದಿದ್ದ ಸಬಿಯಾ 1988ರಲ್ಲಿ ಸಿಯೊಲ್‌ನಲ್ಲಿ ನಡೆದ ಮತ್ತೊಂದು ಒಲಿಂಪಿಕ್ಸ್‌ನಲ್ಲಿ ಏಳನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. 1984ರಲ್ಲಿ ಯುರೋಪಿಯನ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಸಬಿಯಾ ಕೊರೋನ ವೈರಸ್‌ನಿಂದ ಮೃತಪಟ್ಟಿರುವ ವಿಶ್ವದ ಮೊದಲ ಒಲಿಂಪಿಕ್ಸ್ ಫೈನಲಿಸ್ಟ್ ಆಗಿದ್ದಾರೆ ಎಂದು ಇಟಲಿಯ ಒಲಿಂಪಿಕ್ಸ್ ಸಮಿತಿ ತಿಳಿಸಿದೆ.
ಸಬಿಯಾ ಅವರ ತಂದೆ ಕೂಡ ಕೆಲವೇ ದಿನಗಳ ಮೊದಲು ಕೋವಿಡ್-19ಕ್ಕೆ ಬಲಿಯಾಗಿದ್ದರು.





