ವಿದ್ಯುತ್ ದೀಪ ಆರಿಸುವ ವಿಚಾರದಲ್ಲಿ ದಲಿತ ಕುಟುಂಬದ ಮೇಲೆ ದಾಳಿ; ಮನೆಯಲ್ಲಿ ದಾಂಧಲೆ
ಗುರುಗ್ರಾಮ್ : ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ರವಿವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸುವ ವಿಚಾರದಲ್ಲಿ ಉಟಾದ ಜಗಳದಿಂದ ದುಷ್ಕರ್ಮಿಗಳ ತಂಡವೊಂದು ಪರಿಶಿಷ್ಟ ಕುಟುಂಬಕ್ಕೆ ಸೇರಿದ ಇಬ್ಬರು ಮಹಿಳೆಯರ ಸಹಿತ ಎಂಟು ಮಂದಿಯ ಮೇಲೆ ದಾಳಿ ನಡೆಸಿದ ಘಟನೆ ಪಿಂಗೋರೆ ಗ್ರಾಮದ ಪಾಲ್ವಾಲ್ ಎಂಬಲ್ಲಿ ನಡೆದಿದೆ.
ಈ ಕುರಿತು ಪೊಲೀಸರು ದಾಖಲಿಸಿದ ಎಫ್‍ಐಆರ್ ನಲ್ಲಿ 31 ಜನರ ಹೆಸರುಗಳನ್ನು ನಮೂದಿಸಲಾಗಿದ್ದು ಬುಧವಾರ ಸಂಜೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಧಾನಿಯ ಕರೆಯಂತೆ ರವಿವಾರ ರಾತ್ರಿ 9 ಗಂಟೆಯಿಂದ ಆರಂಭಗೊಂಡು 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ ನಂತರ ಮತ್ತೆ ಎಂದಿನಂತೆ ದೀಪ ಹಾಕಿದ್ದ ಸಂದರ್ಭ ಗುಜ್ಜರ್ ಸಮುದಾಯದ ಸುಮಾರು 35 ಮಂದಿ ತಮ್ಮ ಮನೆಯೊಳಕ್ಕೆ ನುಗ್ಗಿ ಜಾತಿ ನಿಂದನೆಗೈದು ಇಡೀ ರಾತ್ರಿ ದೀಪ ಆರಿಸುವಂತೆ ಸೂಚಿಸಿ ಹಲ್ಲೆ ನಡೆಸಿದ್ದಾರೆಂದು ಧನಪಾಲ್ ಎಂಬವರು ದೂರಿನಲ್ಲಿ ಆರೋಪಿಸಿದ್ದಾರೆ.
ಕೈಗಳಲ್ಲಿ ಕೋಲುಗಳು, ಕಬ್ಬಿಣದ ಸರಳುಗಳು ಹಾಗೂ ಇಟ್ಟಿಗೆಗಳೊಂದಿಗೆ ಆಗಮಿಸಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಮನೆಯಲ್ಲಿ ದಾಂಧಲೆಗೈದಿದ್ದೇ ಅಲ್ಲದೆ ಪೊಲೀಸರಿಗೆ ದೂರಿದರೆ ಪರಿಸ್ಥಿತಿ ನೆಟ್ಟಗಾಗದು ಎಂದು ಬೆದರಿಸಿದ್ದಾರೆಂದು ಆರೋಪಿಸಿದ್ದಾರೆ.
ಧನಪಾಲ್ ಆತನ ಪುತ್ರ, ಪುತ್ರಿ ಹಾಗೂ ಕುಟುಂಬದ ಇತರ ಆರು ಮಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಹೆಚ್ಚಿನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.