ಬಿಜೆಪಿಯಿಂದ ಕೋವಿಡ್-19 ಸಹಾಯವಾಣಿಗೆ ಚಾಲನೆ

ಮಂಗಳೂರು, ಎ. 9: ಸಂಕಷ್ಟದಲ್ಲಿರುವ ಜನರಿಗೆ ಸಹಕರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಕೋವಿಡ್ 19 ಸಹಾಯವಾಣಿಗೆ ಪಕ್ಷದ ದ.ಕ. ಜಿಲ್ಲಾ ಕಚೇರಿಯಲ್ಲಿಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.
ಸಹಾಯವಾಣಿ ಸಂಖ್ಯೆ 08068324040 ಆಗಿದ್ದು, ಕರ್ನಾಟಕ ರಾಜ್ಯಕ್ಕೆ ಈ ಸಂಖ್ಯೆ ಅನ್ವಯವಾಗುತ್ತದೆ. ಸಂಕಷ್ಟದಲ್ಲಿರುವ ನಾಗರಿಕರು ಈ ಸಹಾಯವಾಣಿಗೆ ಕರೆ ಮಾಡಿದರೆ ಅಗತ್ಯ ಸಹಕಾರವನ್ನು ಒದಗಿಸಲಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಸಹಾಯವಾಣಿಗೆ ಕರೆ ಮಾಡಿದರೆ, ಕರೆ ಮಾಡುವವರ ಹೆಸರು, ವಿಳಾಸದೊಂದಿಗೆ ಬೇಕಾಗಿರುವ ಸಹಾಯದ ಮಾಹಿತಿಯನ್ನು ಪಡೆಯಲಾಗುತ್ತದೆ. ಎಲ್ಲಾ ಮಾಹಿತಿ ಸಂಗ್ರಹಿಸಿ ಸಾಫ್ಟ್‌ವೇರ್ ಮೂಲಕ ನಾಗರಿಕರೆ ಎಸ್‌ಎಂಎಸ್ ಮೂಲಕ ತಲುಪಿಸಲಾಗುತ್ತದೆ. ಸಾಫ್ಟ್‌ವೇರ್ ಮೂಲಕವೇ ಎಸ್‌ಎಂಎಸ್ ಅನ್ನು ರಾಜ್ಯ, ವಿಭಾಗ, ಜಿಲ್ಲೆ ಮತ್ತು ಮಂಡಲ ಉಸ್ತುವಾರಿ ಪ್ರತಿನಿಧಿ ಕಾರ್ಯಕರ್ತರಿಗೂ ತಲುಪಿಸಲಾಗುತ್ತದೆ. ಕಾರ್ಯಕರ್ತರಿಗೆ ಕಳುಹಿಸುವ ಎಸ್‌ಎಂಎಸ್‌ನಲ್ಲಿ ಲಿಂಕ್ ಇರುತ್ತದೆ. ಈ ಲಿಂಕ್ ಒತ್ತಿದರೆ ಮನವಿಯ ಸಂಪೂರ್ಣ ವಿವರ ಪಡೆಯಬಹುದು. ಬಳಿಕ ಕಾರ್ಯಕರ್ತರು ಮನವಿಗಳ ಆಧಾರದ ಮೇಲೆ ಆಹಾರ, ಔಷಧಿ ಮುಂತಾದವುಗಳನ್ನು ಸಂಗ್ರಹಿಸುತ್ತಾರೆ. ಬಳಿಕ ಕಾರ್ಯಕರ್ತರು ಕರೆ ಮಾಡಿದ ವ್ಯಕ್ತಿಗೆ ಆಹಾರ, ಔಷಧಿ ಮೊದಲಾದ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ ಹಾಗೂ ಕಾರ್ಯ ಪೂರ್ಣವಾದ ಮಾಹಿತಿಯ ಫೋಟೋವನ್ನು ಅಪ್‌ಲೋಡ್ ಮಾಡುತ್ತಾರೆ ಎಂದು ಸಹಾಯವಾಣಿ ಕಾರ್ಯಾಚರಣೆಯ ವಿವರವನ್ನು ಅವರು ನೀಡಿದರು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಮೇಯರ್ ದಿವಾಕರ ಪಾಂಡೇಶ್ವರ, ಜಿ.ಪಂ. ಉಪಾಧ್ಯ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.





