'ಕೊರೋನ ಹೆಸರಲ್ಲಿ ಕೋಮುದ್ವೇಷ ಹರಡುವ ಕನ್ನಡ ಪತ್ರಿಕೆಗಳು, ಚಾನೆಲ್ ಗಳ ಲೈಸೆನ್ಸ್ ರದ್ದುಗೊಳಿಸಿ'
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಶನಲ್ ಬ್ರಾಡ್ ಕಾಸ್ಟಿಂಗ್ ಅಥಾರಿಟಿ ಆಫ್ ಇಂಡಿಯಾಗೆ ದೂರು
ಮಂಗಳೂರು: ಕೊರೋನ ವೈರಸ್ ಬಿಕ್ಕಟ್ಟಿನ ನಡುವೆ ಕನ್ನಡದ ದಿನಪತ್ರಿಕೆಗಳು ಮತ್ತು ಟಿವಿ ಚಾನೆಲ್ ಗಳು ತಬ್ಲೀಗಿ ಜಮಾಅತ್ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಭಾರತದಲ್ಲಿರುವ ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಶನಲ್ ಬ್ರಾಡ್ ಕಾಸ್ಟಿಂಗ್ ಅಥಾರಿಟಿ ಆಫ್ ಇಂಡಿಯಾಗೆ ದೂರು ನೀಡಿದ್ದಾರೆ.
ಕನ್ನಡ ಪತ್ರಿಕೆಗಳಾದ 'ವಿಶ್ವವಾಣಿ' , 'ವಿಜಯವಾಣಿ', ಚಾನೆಲ್ ಗಳಾದ 'ಸುವರ್ಣ ನ್ಯೂಸ್', 'ಬಿಟಿವಿ', 'ನ್ಯೂಸ್ 18', 'ಪಬ್ಲಿಕ್ ಟಿವಿ' ಮುಸ್ಲಿಮರ ವಿರುದ್ಧ ಪ್ರಚಾರ ನಡೆಸುತ್ತಿದೆ ಎಂದವರು ಆರೋಪಿಸಿದ್ದಾರೆ.
ದಾರಿ ತಪ್ಪಿಸುವ ಮಾಹಿತಿ, ತಬ್ಲೀಗಿ ಜಮಾಅತ್ ಗೆ ಇಡೀ ಮುಸ್ಲಿಂ ಸಮುದಾಯದ ಜೊತೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಈ ಚಾನೆಲ್ ಗಳು, ಪತ್ರಿಕೆಗಳು ವರದಿ ಮಾಡಿದ ನಂತರ ಮುಸ್ಲಿಂ ಸಮುದಾಯದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವ್ಯಾಪಾರಿಗಳು, ಮೀನುಗಾರರು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ದೇಶಾದ್ಯಂತ ಮುಸ್ಲಿಮರು ಕೊರೋನ ವೈರಸನ್ನು ಹರಡುತ್ತಿದ್ದಾರೆ ಎನ್ನುವ ದುರುದ್ದೇಶಪೂರಿತ ವ್ಯಾಖ್ಯಾನ ನೀಡುವಲ್ಲಿ ಚಾನೆಲ್ ಗಳು, ಪತ್ರಿಕೆಗಳು ಸಫಲವಾಗಿವೆ.
ಈ ಮಾಧ್ಯಮಗಳು ಕೊರೋನ ಜಿಹಾದ್, ಕೊರೋನ ಭಯೋತ್ಪಾದನೆ, ಕೊರೋನ ಬಾಂಬ್ ಎನ್ನುವ ಪದಗಳನ್ನು ಉಪಯೋಗಿಸುತ್ತಿದ್ದು, ಇದು ಕೋಮುದ್ವೇಷದ ಪ್ರಸಾರಕ್ಕೆ ಹೊರತು ಜನರ ಉಪಯೋಗಕ್ಕಲ್ಲ.
ವಿಜಯ ಕರ್ನಾಟಕ ಎನ್ನುವ ಪತ್ರಿಕೆ ಕೊರೋನ ಹರಡಲು ಮುಸ್ಲಿಮರೇ ಕಾರಣ ಎನ್ನುವ ವರದಿಯನ್ನು ಪ್ರಕಟಿಸಿದ್ದು, 'ಸತ್ತವರೆಲ್ಲಾ ಒಂದೇ ಸಮುದಾಯದವರು' ಎನ್ನುವ ತಲೆಬರಹವನ್ನು ನೀಡಿತ್ತು. ಟಿಆರ್ ಪಿ ಹೆಚ್ಚಿಸುವುದಕ್ಕಾಗಿ ಈ ಚಾನೆಲ್ ಗಳು, ಪತ್ರಿಕೆಗಳು ಕೋವಿಡ್ 19ಗೆ ಕೋಮುವಾದದ ಬಣ್ಣ ಬಳಿಯುತ್ತಿದೆ ಎಂದವರು ಆರೋಪಿಸಿದ್ದಾರೆ.
ಹಾಗಾಗಿ ಸಂಬಂಧಪಟ್ಟ ಪತ್ರಿಕೆ, ಚಾನೆಲ್ ಗಳ ಸಂಪಾದಕರು, ವರದಿಗಾರರ ವಿರುದ್ಧ ಡಿಎಂಎ ಕಾಯ್ದೆಯ ಸೆಕ್ಷನ್ 54ರ ಅಡಿ ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕು. ಕೋಮುವಾದವನ್ನು ಹರಡಿದ್ದಕ್ಕಾಗಿ ಮತ್ತು ತಪ್ಪು ಮಾಹಿತಿ ಮೂಲಕ ದೇಶವನ್ನು ಒಡೆದದ್ದಕ್ಕಾಗಿ ಈ ಮಾಧ್ಯಮಗಳ ಲೈಸೆನ್ಸ್ ರದ್ದುಗೊಳಿಸಬೇಕು. ಈ ಮಾಧ್ಯಮಗಳ ಸಂಪಾದಕರು, ವರದಿಗಾರರ ವಿರುದ್ಧ ಐಪಿಸಿ, ಸಿಆರ್ ಪಿಸಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.