ಹೊರಗಿನವರು ಬಾರದಂತೆ ಉಡುಪಿ ಜಿಲ್ಲೆಯ ಗಡಿಗಳಲ್ಲಿ ಸೀಲ್: ಜಿಲ್ಲಾಧಿಕಾರಿ ಜಗದೀಶ್
ಕೊರೋನ ಸೋಂಕಿನಿಂದ ಮೂವರೂ ಗುಣಮುಖ

ಉಡುಪಿ, ಎ.10: ಉಡುಪಿ ಜಿಲ್ಲೆಗೆ ಹೊರಗಿನಿಂದ ಜನರು ಈಗಲೂ ಬರುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಗಡಿಗಳನ್ನು ಸೀಲ್ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕೆಲವರು ಗಡಿಯಲ್ಲಿ ಪಾಸ್ ತೋರಿಸಿ ಜಿಲ್ಲೆಯೊಳಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಹೊರಗಿನವರನ್ನು ಒಳಗಡೆ ಹಾಗೂ ಒಳಗಡೆ ಇರುವವರು ಹೊರಗಡೆ ಹೋಗಲು ಅವಕಾಶ ನೀಡುವುದಿಲ್ಲ ಎಂದರು.
ಸದ್ಯ ಔಷಧಿ ಹಾಗೂ ಸರಕು ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಗಳಿಗೆ ಜಿಲ್ಲೆಯೊಳಗೆ ಪ್ರವೇಶ ನೀಡುವುದಿಲ್ಲ. ಹಾಗಾಗಿ ನಮ್ಮ ನೆರೆಯ ಹಾಗೂ ಬೇರೆ ಜಿಲ್ಲೆಯವರು ಮತ್ತು ಹೊರರಾಜ್ಯದವರು ಸದ್ಯಕ್ಕೆ ನಮ್ಮ ಜಿಲ್ಲೆಗೆ ಬರುವುದು ಬೇಡ. ಬಂದರೂ ಕೂಡ ನಮ್ಮ ಗಡಿಯೊಳಗೆ ಯಾರನ್ನು ಬಿಡುವು ದಿಲ್ಲ. ಆದುದರಿಂದ ನೀವೆಲ್ಲ ಎಲ್ಲೆಲ್ಲಿ ಇದ್ದಿರೋ ಅಲ್ಲೇ ಆರಾಮವಾಗಿ ಇರಬೇಕು ಎಂದು ಅವರು ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ದಾಖಲಾಗಿರುವ ಮೂರು ಕೊರೋನ ಪಾಸಿಟಿವ್ ಪ್ರಕರಣದ ಎಲ್ಲರೂ ಕೂಡ ಗುಣಮುಖರಾಗಿದ್ದು, ಸದ್ಯದಲ್ಲೇ ಅವರೆಲ್ಲ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ. ಅವರ ಸಂಪರ್ಕಿಸಿದ ಎಲ್ಲರನ್ನು ಸರಕಾರದ ವಶದಲ್ಲಿರಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರ ವರದಿ ಕೂಡ ನೆಗೆಟಿವ್ ಬಂದಿದೆ. ಹಾಗಾಗಿ ನಮಗೆ ಇರುವ ಎಲ್ಲ ಆತಂಕ ದೂರವಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯ ಒಳಗಿನಿಂದ ಕೊರೋನ ವೈರಸ್ ಹರಡುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.







