ವಿಟ್ಲ : ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ಬಂಟ್ವಾಳ, ಎ.10: ಬಟ್ಟೆ ಒಗೆಯಳೆಂದು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಉಕ್ಕುಡ ದರ್ಬೆಯ ಹೋನೆಸ್ಟ್ ಕಲ್ಲಿನ ಕೋರೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೊಡುಂಗೈ ರಾಧುಕಟ್ಟೆ ನಿವಾಸಿ ಅಡಿಕೆ ವ್ಯಾಪಾರಿ ಹಾಜಿ ಅಹ್ಮದ್ ಕುಂಞಿ ಎಂಬವರ ಪುತ್ರ ಅಬ್ದುಲ್ ರಝಾಕ್ (43) ಮೃತರು.
ರಝಾಕ್ ಅವರು ಸಂಜೆಯ ವೇಳೆಗೆ ನೀರು ಪಾಲಾಗಿದ್ದು ಶೋಧದ ಬಳಿಕ ರಾತ್ರಿ 9 ಗಂಟೆಯ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿರುವ ವಿಷಯವನ್ನು ರಝಾಕ್ ರೊಂದಿಗೆ ತೆರಳಿದ್ದ ಅವರ ಸಹೋದರಿಯ ಪುತ್ರ ಮನೆಗೆ ಬಂದು ತಿಳಿಸಿದ್ದ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ರಾಧುಕಟ್ಟೆಯಲ್ಲಿರುವ ಮನೆಯ ದುರಸ್ತಿ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಮಯದ ಹಿಂದೆ ಉಕ್ಕುಡ ದರ್ಬೆಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ನೆಲೆಸಿದ್ದ ಮೃತ ರಝಾಕ್ ಎಂದಿನಂತೆ ಇಂದು ಬಟ್ಟೆ ಒಗೆಯಲೆಂದು ಇಲ್ಲಿನ ಹೋನೆಸ್ಟ್ ಕಲ್ಲಿನ ಕೋರೆಗೆ ತೆರಳಿದ್ದರು. ಬಟ್ಟೆ ತೊಳೆಯುತ್ತಿದ್ದ ಸಂದರ್ಭ ಚಾಪೆಯೊಂದು ಕೈ ತಪ್ಪಿ ದೂರ ಹೋಗಿದ್ದು ಅದನ್ನು ಹಿಡಿಯಲು ಪ್ರಯತ್ನಿಸಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಡಿಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಝಾಕ್ ಪತ್ನಿ, ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಮೂಲ ಊರಾದ ಅಳಿಕೆಯಲ್ಲಿ ದಫನ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








