ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಿಮಿನಲ್ ಕೇಸ್
ಮಂಗಳೂರು, ಎ.10: ಖಾಸಗಿ ಸುದ್ದಿವಾಹಿನಿಯ ಹಳೆಯ ವೀಡಿಯೋ ಹಾಕಿ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್‌ಗೆ ಲಾಕ್‌ಡೌನ್ ಸಡಿಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ವಿಚಾರ ಗಮನಕ್ಕೆ ಬಂದ ತಕ್ಷಣ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಅವರು ಮುಸ್ಲಿಂ ಸೆಂಟ್ರಲ್ ಕಮಿಟಿ ಸಹಿತ ಮುಸ್ಲಿಂ ಸಮಾಜದ ಮುಖಂಡರಿಗೆ ಗಮನ ಸೆಳೆದು ಸ್ಪಷ್ಟಣೆ ಬಯಸಿದರು. ಅದರಂತೆ ಖಾಝಿ ಶೈಖುನಾ ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಸಂಪರ್ಕಿಸಿದಾಗ ‘ಪ್ರತಿಯೊಬ್ಬರೂ ಜುಮಾ ನಮಾಝ್‌ನ್ನು ಮನೆಯಲ್ಲೇ ನಿರ್ವಹಿಸಬೇಕು. ಈ ಹಿಂದಿನ ಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿಕೆ ನೀಡಿದರು. ಇದರೊಂದಿಗೆ ಸಮಾಜದಲ್ಲಿ ಈ ಕುರಿತು ಉಂಟಾಗಿದ್ದ ಗೊಂದಲಕ್ಕೂ ತೆರೆಬಿತ್ತು.
ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಖಾಸಗಿ ವಾಹಿನಿಯ ಹಳೆಯ ವೀಡಿಯೋ ಸಹಿತ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮರುಪ್ರಸಾರ ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.





