ಕೊರೋನ ವಾರಿಯರ್ಸ್‌ನಿಂದ ನಕಲಿ ಸುದ್ದಿಗಳ ಪತ್ತೆ ಕಾರ್ಯ: ದ.ಕ. ಜಿಲ್ಲೆಯಲ್ಲಿ 483 ಸ್ವಯಂ ಸೇವಕರ ತಂಡ ಕಾರ್ಯಾಚರಣೆ
ಮಂಗಳೂರು, ಎ.10: ಕೊರೋನ ಸೋಂಕು ತನ್ನ ವ್ಯಾಪ್ತಿಯನ್ನು ತೀವ್ರಗೊಳಿಸಿರುವಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಕೂಡಾ ಹರಿದಾಡಲಾರಂಭಿಸಿದೆ. ಈ ನಕಲಿ ಸುದ್ದಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ತಜ್ಞರನ್ನೊಳಗೊಂಡ ತಂಡವೊಂದು ಕಾರ್ಯಾಚರಿಸುತ್ತಿದೆ. ಒಂದು ವಾರದಿಂದೀಚೆಗೆ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಇಂತಹ ಸುಳ್ಳು ಸುದ್ದಿಗಳನ್ನು ಈ ತಂಡ ಪತ್ತೆ ಹಚ್ಚಿದೆ.
‘‘ನಮ್ಮ ತಂಡ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದು ಮಾತ್ರ ಅಲ್ಲ. ನಾವು ವಾರ್ತಾ ಇಲಾಖೆಯ ಅಧಿಕೃತ ಸ್ವಯಂ ಸೇವಕರು. ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ರೆಡ್‌ಕ್ರಾಸ್ ಸಂಸ್ಥೆಗಳು ಜತೆಯಾಗಿ ಡಿಕೆ ಕೊರೋನ ವಾರಿಯರ್ಸ್ ತಂಡ ಕಾರ್ಯಾಚರಿಸುತ್ತಿದೆ. ದ.ಕ. ಜಿಲ್ಲೆಯ ಗುಂಪಿನಲ್ಲಿ 483 ಸ್ವಯಂ ಸೇವಕರಿದ್ದಾರೆ’’ ಎಂದು ಜಿಲ್ಲಾ ತಂಡದ ಪ್ರಮುಖ ಸ್ವಯಂಸೇವಕರಲ್ಲಿ (ಮಾಸ್ಟರ್ ವಾಲೆಂಟಿಯರ್ಸ್) ಓರ್ವರಾಗಿರುವ ಸಹನಾ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘‘ಜಿಲ್ಲಾಡಳಿತಕ್ಕೆ ನಮ್ಮ ತಂಡದ ಪಟ್ಟಿಯನ್ನು ಜಿಲ್ಲಾ ವಾರ್ತಾಧಿಕಾರಿ ನೀಡಿದ್ದು, ಅವರು ಸ್ಥಳೀಯ ಡಿಐಪಿಆರ್ ಅಧಿಕಾರಿಯಾಗಿರುತ್ತಾರೆ. ಬೂಮ್ ಲೈವ್ ನವರು ನಕಲಿ ಸುದ್ದಿಗಳ ಸತ್ಯಾಂಶವನ್ನು ಪತ್ತೆ ಹಚ್ಚುವ ರೀತಿಯಲ್ಲಿ ಇದೀಗ ನಮ್ಮ ತಂಡ ನಮ್ಮದೇ ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ತ್ಯಾಂಶವನ್ನು ಪತ್ತೆ ಹಚ್ಚುತ್ತಿದೆ. ಜಿಲ್ಲೆಯ ತಂಡ ಎರಡು ವಾಟ್ಸಾಪ್ ಗುಂಪುಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಈ ಫ್ಯಾಕ್ಟ್ ಚೆಕ್ ಮಾಡಲು ತಂಡದಲ್ಲಿ ಕಂಪ್ಯೂಟರ್ ಸಾಯನ್ಸ್‌ನಲ್ಲಿ ನುರಿತ ವಿನ್ಯಾಸಗಾರರು, ತಂತ್ರಜ್ಞರು, ವೃತ್ತಿಪರರು ಕೂಡಾ ತಂಡದಲ್ಲಿದ್ದಾರೆ. 483ರಲ್ಲಿ ಆಯ್ದ ನುರಿತ ವೃತ್ತಿಪರರನ್ನು ಒಳಗೊಂಡ 21 ಜನರ ತಂಡವಿದೆ. 21 ಜನರು ಪ್ರತಿನಿತ್ಯ ಸಕ್ರಿಯರಾಗಿರುತ್ತಾರೆ. ಯಾವುದೇ ರೀತಿಯ ಸುಳ್ಳು ಸುದ್ದಿಗಳು ಬಂದಾಗ ಅದರ ಸತ್ಯಾಂಶವನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಾರೆ. ನಮ್ಮ ದೊಡ್ಡ ವಾಟ್ಸಾಪ್ ಗ್ರೂಪ್‌ಗೆ ಸುಳ್ಳು ಸುದ್ದಿಗಳು ಬರುತ್ತವೆ. ಮುಖ್ಯವಾಗಿ ಹಳೆ ಸುದ್ದಿಗಳನ್ನು ಹೊಸತಾಗಿ ಈಗಿನ ಪರಿಸ್ಥಿತಿಗೆ ಬದಲಾಯಿಸಿಕೊಂಡಿರುವುದು, ಕೋಮು ಪ್ರಚೋದನಕಾರಿ ಬರಹಗಳು ಇಂತಹ ಎಲ್ಲಾ ರೀತಿಯ ಸುಳ್ಳು ಫಾರ್ವಾಡ್‌ಗಳ ಬಗ್ಗೆಯೂ ನಮ್ಮ ತಂಡ ಅದರ ಸತ್ಯಾಂಶವನ್ನು ಕಂಡು ಹಿಡಿಯುವ ಕೆಲಸವನ್ನು ನಮ್ಮದೇ ನೆಲೆಯಲ್ಲಿ ಮಾಡುತ್ತಿದ್ದೇವೆ’’ ಎಂದು ಅವರು ಹೇಳುತ್ತಾರೆ.
‘ತರಕಾರಿ ಮಾರುವವರು ತರಕಾರಿ ನೆಕ್ಕುತ್ತಾರೆಂಬ ಸುದ್ದಿ, ಭಜನಾ ಮಂದಿರದಲ್ಲಿ ಜನ ಸೇರಿರುವ ಫೋಟೋ, ಪಾಕಿಸ್ತಾನದ ಒಂದು ವೀಡಿಯೋ ಅದು ತಬ್ಲೀಗಿಯದ್ದು ಎಂದು ಹೇಳಿ ವೈರಲ್ ಮಾಡಲಾಗಿತ್ತು. ಇವುಗಳೆಲ್ಲವೂ ಸುಳ್ಳು ಎಂಬುದನ್ನು ನಾವು ಸಾಬೀತು ಪಡಿಸಿದ್ದೇವೆ. ಇಂತಹ ನಾನಾ ರೀತಿಯ ಸುದ್ದಿಗಳು ನಮ್ಮ ಗ್ರೂಪ್‌ಗೆ ಬರುತ್ತದೆ. ಅದನ್ನು ನಾವು ಪರಿಶೀಲಿಸುತ್ತೇವೆ. ಸಾರ್ವಜನಿಕರ ಜತೆ ಸಂಪರ್ಕ ಇರುವ ನಮ್ಮ ಸ್ವಯಂ ಸೇವಕರ ಮೂಲಕ ನಮ್ಮ ಗ್ರೂಪ್‌ಗೆ ಸುಳ್ಳು ಸುದ್ದಿಗಳೆನ್ನುವ ಫಾರ್ವಾಡ್‌ಗಳು ರವಾನೆಯಾಗುತ್ತವೆ’’ ಎಂದು ಸಹನಾ ವಿವರಿಸುತ್ತಾರೆ.
‘‘ಮಾ. 26ಕ್ಕೆ ನಮ್ಮ ತಂಡ ರಚನೆಯಾಗಿದೆ. ಆರಂಭದಲ್ಲಿ ಇಲಾಖಾ ಮಟ್ಟದಲ್ಲಿ ನಮಗೆ ತರಬೇತಿ ನೀಡಲಾಗಿದೆ. ತರಬೇತುಗೊಂಡವರಿಗೆ ಆನ್‌ಲೈನ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಸ್ವಯಂ ಸೇವಕರಿಗೆ ಟೆಸ್ಟ್ ಕೂಡಾ ನೀಡಲಾಗಿತ್ತು. ಮೂರ್ನಾಲು ದಿನಗಳ ಕಾಲ ಪ್ರಾಥಮಿಕ ಹಂತದ ತರಬೇತಿ, ಬಳಿಕ ಗ್ರೂಪ್ ರಚಿಸಿ ಅಲ್ಲಿಯೂ ಮಾಹಿತಿಯನ್ನು ಒದಗಿಸುವ ಕೆಲಸದ ಬಳಿಕ ಕಳೆದೊಂದು ವಾರದಿಂದ ನಮ್ಮ ತಂಡ ಶಿಸ್ತುಬದ್ಧವಾಗಿ ಕಾರ್ಯಾಚರಿಸುತ್ತಿದೆ. ನಮ್ಮ ಗ್ರೂಪ್‌ಗೆ 60ಕ್ಕೂ ಅಧಿಕ ಸಂದೇಶಗಳ ಸತ್ಯಾಂಶವನ್ನು ಪತ್ತೆ ಹಚ್ಚಿದ್ದೇವೆ. ಅದರ ನೈಜತೆ ಪತ್ತೆ ಹಚ್ಚಿದ ಮೇಲೆ ಆ ಮಾಹಿತಿಯನ್ನೂ ನಮ್ಮ ಗ್ರೂಪ್‌ನಿಂದ ಇತರ ಗ್ರೂಪ್‌ಗಳಿಗೆ ರವಾನಿಸುತ್ತೇವೆ. ಪ್ರತಿ ಸ್ವಯಂಸೇವಕರು ಕನಿಷ್ಠ 20 ಜನರಿಗಾದರೂ ಆ ಸುಳ್ಳು ಸಂದೇಶದ ವಾಸ್ತವಾಂಶವನ್ನು ಕಳುಹಿಸುವ ಕೆಲಸವನ್ನು ಮಾಡುತ್ತೇವೆ. ಸ್ವಯಂ ಸೇವಕರು ಸಕ್ರಿಯರಾಗಿದ್ದರೆ ಮಾತ್ರವೇ ಅವರಿಗೆ ಐಡಿಯನ್ನು ನೀಡಲಾಗುತ್ತದೆ’’
‘‘ರಾಜ್ಯದಲ್ಲಿ ಈ ತಂಡ ಕಾರ್ಯಾಚರಿಸುತ್ತಿದ್ದು, ಒಟ್ಟು 15 ಮಂದಿ ಮಾಸ್ಟರ್ ವಾಲಂಟಿಯರ್ಸ್‌ಗಳಿದ್ದಾರೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ತಂಡಗಳ ಜವಾಬ್ಧಾರಿಯನ್ನು ನಾನು ನಿರ್ವಹಿಸುತ್ತಿದ್ದೇನೆ. ಉಡುಪಿ ಜಿಲ್ಲೆಯ ತಂಡದಲ್ಲಿ ಒಟ್ಟು 263 ಸ್ವಯಂ ಸೇವಕರು ಕೊರೋನ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ.ಕ. ಜಿಲ್ಲೆಯ 9 ತಾಲೂಕು ಮಟ್ಟದಲ್ಲಿಯೂ ಈ ತಂಡ ಪ್ರತ್ಯೇಕ ಗುಂಪುಗಳಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಳ್ಳು ಸುದ್ದಿಗಳು, ಸಂದೇಶಗಳ ನೈಜತೆ ಕಂಡು ಹಿಡಿಯುವ ಜತೆಗೆ ಜತೆಗೆ ನಮ್ಮ ತಂಡ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ವೈದ್ಯಕೀಯ ಸೌಲಭ್ಯ ಪೂರೈಕೆ ಬಗ್ಗೆಯೂ ನಮ್ಮ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಾರೆ’’ ಎಂದು ಸಹನಾ ಮಾಹಿತಿ ಒದಗಿಸಿದ್ದಾರೆ.







