ದ.ಕ.ಜಿಲ್ಲಾಧಿಕಾರಿ ಕಚೇರಿಯ ‘ಸಹಾಯವಾಣಿ’ಯಲ್ಲಿ ಸಿಗದ ಸ್ಪಂದನೆ: ಹಿರಿಯ ನ್ಯಾಯವಾದಿಯ ಆರೋಪ
ಮಂಗಳೂರು, ಎ.10: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್ ಸಂದರ್ಭ ತುರ್ತು ಸೇವೆಗಾಗಿ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾದ ‘ಸಹಾಯವಾಣಿ’ಯಲ್ಲಿ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ನಗರದ ಹಿರಿಯ ನ್ಯಾಯವಾದಿ ಎಸ್.ಎಸ್.ಖಾಝಿ ಆರೋಪಿಸಿದ್ದಾರೆ.
ಬಜ್ಪೆಯ ವ್ಯಕ್ತಿಯೊಬ್ಬರಿಗೆ ದಿನಸಿ ಸಾಮಗ್ರಿಯ ಆವಶ್ಯಕತೆಯಿತ್ತು. ಅದರಂತೆ ತಾನು ಅವರಿಗೆ ತನ್ನದೇ ಕಾರಿನಲ್ಲಿ ತಲುಪಿಸುವ ಸಲುವಾಗಿ ಪಾಸ್ ಪಡೆಯಬೇಕಿತ್ತು. ಅದಕ್ಕಾಗಿ ತುರ್ತುಸೇವೆಗಾಗಿ ಮೀಸಲಿಟ್ಟಿರುವ ದೂರವಾಣಿ ಸಂಖ್ಯೆಗೆ ಫೋನ್ ಕರೆ ಮಾಡಿದಾಗ ಅಲ್ಲಿಂದ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಒಂದೊಂದು ವೇಳೆ ಒಬ್ಬೊಬ್ಬರು ಕರೆ ಸ್ವೀಕರಿಸಿ, ನೀವು ಅವರಿಗೆ ಮಾಡಿ, ಇವರಿಗೆ ಮಾಡಿ ಎನ್ನುತ್ತಾ ಡಿಸಿ, ಎಡಿಸಿ, ಎಸಿ ಮತ್ತಿತರ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ನೀಡತೊಡಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ತುರ್ತು ಸೇವೆಯೂ ಸಾಧ್ಯವಿಲ್ಲ. ಜಿಲ್ಲಾಡಳಿತದ ಸಹಾಯವಾಣಿಯಲ್ಲೇ ಸೂಕ್ತ ರೀತಿಯ ಸ್ಪಂದನೆ ಸಿಗದಿದ್ದರೆ ಇನ್ನು ಬೇರೆ ಕಡೆ ಯಾವ ರೀತಿಯ ಸ್ಪಂದನೆ ಸಿಕ್ಕೀತು? ಕೊರೋನ ಹಾವಳಿಯಿಂದ ಜನರು ತತ್ತರಿಸಿರುವಾಗ ಸಂಕಷ್ಟದಲ್ಲಿರುವ ಜನರ ನೆರವಿಗೆ ಜಿಲ್ಲಾಡಳಿತವೇ ಧಾವಿಸದಿದ್ದರೆ ಹೇಗೆ ಎಂದು ಎಸ್‌ಎಸ್ ಖಾಝಿ ಪ್ರಶ್ನಿಸಿದ್ದಾರೆ.





