ಬ್ರಿಟನ್: ಕೊರೋನ ವೈರಸ್ ನಿಂದ ದಿನದಲ್ಲಿ 881 ಸಾವು

ಲಂಡನ್, ಎ. 10: ಕಳೆದ 24 ಗಂಟೆಗಳ ಅವಧಿಯಲ್ಲಿ 881 ಮಂದಿ ನೂತನ-ಕೊರೋನ ವೈರಸ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಬ್ರಿಟನ್ ಗುರುವಾರ ಘೋಷಿಸಿದೆ. ಇದರೊಂದಿಗೆ ಆ ದೇಶದಲ್ಲಿ ಮಾರಕ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆ 7,978ಕ್ಕೆ ಏರಿದೆ.
ದೇಶದ ಉಸ್ತುವಾರಿಯೂ ಆಗಿರುವ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಈ ಅಂಕಿಸಂಖ್ಯೆಗಳನ್ನು ಘೋಷಿಸಿದರು. ದೇಶದಲ್ಲಿ ಕಾಯಿಲೆಯು ಇನ್ನೂ ಉತ್ತುಂಗವನ್ನು ತಲುಪಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಧಾನಿ ಬೊರಿಸ್ ಜಾನ್ಸನ್ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ದೇಶದ ಉಸ್ತುವಾರಿಯನ್ನು ರಾಬ್ ಹೊತ್ತಿದ್ದಾರೆ.
ಐಸಿಯುನಿಂದ ಹೊರಬಂದ ಬ್ರಿಟಿಶ್ ಪ್ರಧಾನಿ
ಲಂಡನ್‌ನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ, ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್‌ರನ್ನು ಗುರುವಾರ ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗಿದೆ ಎಂದು ಅವರ ಡೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.
‘‘ಪ್ರಧಾನಿಯನ್ನು ಗುರುವಾರ ಸಂಜೆ ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಅಲ್ಲಿ ಅವರು ಹೆಚ್ಚಿನ ನಿಗಾದಲ್ಲಿರುತ್ತಾರೆ’’ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.







