ಕೋಮುದ್ವೇಷ ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಷ್ಟ್ರಪತಿ, ಪ್ರಧಾನಿಗೆ ಮುಸ್ಲಿಂ ಮುಖಂಡರ ಮನವಿ
ಬೆಂಗಳೂರು : ದೇಶವು ಕೊರೋನ ವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿರುವ ನಡುವೆ ಕೋಮುದ್ವೇಷ ಹರಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಮುಸ್ಲಿಂ ಮುಖಂಡರು ರಾಷ್ಟ್ರಪತಿ, ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
ಕೊರೋನ ರೂಪದಲ್ಲಿ ಭಾರತವು ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿದೆ. ಆದರೆ ನಿಝಾಮುದ್ದೀನ್ ತಬ್ಲೀಗಿ ಮರ್ಕಝ್‌ನ ಸಭೆಯಲ್ಲಿ ಪಾಲ್ಗೊಂಡ ಕೆಲವರಲ್ಲಿ ಕೊರೋನ ವೈರಸ್ ದೃಢಪಟ್ಟ ನಂತರ, ದೇಶದ ಸಾಂಕ್ರಾಮಿಕದ ಪರಿಸ್ಥಿತಿಗೆ ಮುಸ್ಲಿಮರೇ ಕಾರಣ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ. ‘ತಬ್ಲೀಗಿ ವೈರಸ್’, ‘ಕೊರೋನ ಜಿಹಾದ್’ ಇತ್ಯಾದಿ ಹಲವು ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಸಂಘಟಿತ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಯೂಟ್ಯೂಬ್, ಟಿಕ್‌ಟಾಕ್, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷ ಹರಡುವ ಸಾವಿರಾರು ತುಣುಕುಗಳು ಹರಿದಾಡುತ್ತಿದೆ. ಹಲವು ಪ್ರಮುಖ ಮಾಧ್ಯಮಗಳು ಪ್ರಸಾರ ಮಾಡುವ 'ಇಸ್ಲಾಮೋಫೋಬಿಯ' ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಇದರ ಪರಿಣಾಮವಾಗಿ, ಅಮಾಯಕ ಮುಸ್ಲಿಮರ ಮೇಲೆ ಹಲ್ಲೆಗಳು ನಡೆಯುತ್ತಿವೆ ಮತ್ತು ಅವರ ಧಾರ್ಮಿಕ ಅಸ್ಮಿತೆಯ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲಾಗಿದೆ ಎಂಬ ಘಟನೆಗಳು ದೇಶದ ಹಲವೆಡೆ ನಡೆದಿವೆ.
ಮುಸ್ಲಿಮರು ವೈರಸ್ ಹರಡುತ್ತಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ದೆಹಲಿಯಲ್ಲಿ ಮಸೀದಿಯೊಂದರ ಮೇಲೆ ನಡೆಸಿದ ದಾಳಿಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವಾದ ಇಸ್ಲಾಮೋಫೋಬಿಕ್ ವಿಷಯವೇ ಕಾರಣವಾಗಿದೆ.
ಕೆಲವು ರಾಜ್ಯ ಸರಕಾರಗಳು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ. ಆದರೆ ದುರದೃಷ್ಟಕರ ಸಂಗತಿಯೆಂದರೆ ಭಾರತ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿಲ್ಲ. ಮತ್ತೊಂದೆಡೆ, ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಕೋರೋನ ವೈರಸ್ ಪ್ರಕರಣಗಳ ಪರಿಷ್ಕರಣೆಗಳು, ನಿರ್ದಿಷ್ಟವಾಗಿ ತಬ್ಲೀಗಿ ಮರ್ಕಝ್ ಸಂಪರ್ಕ ಹೊಂದಿರುವ ಪ್ರಕರಣಗಳ ಸಂಖ್ಯೆಯನ್ನು ಉಲ್ಲೇಖಿಸಿದ್ದು ಕೋಮು ಬೆಂಕಿಗೆ ಇಂಧನವನ್ನು ಸುರಿಯುವಂತಿದೆ.
ಆದುದರಿಂದ ದೇಶವು ಈ ಸಾಂಕ್ರಾಮಿಕ ರೋಗದ ವಿರುದ್ಧ ಒಂದಾಗಿ ಹೋರಾಡಬೇಕಾದ ಸಮಯದಲ್ಲಿ ದ್ವೇಷ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳು ಸೇರಿದಂತೆ ಮುಖ್ಯವಾಹಿನಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಸಲಾಗುತ್ತಿರುವ ದ್ವೇಷ ಪ್ರಚಾರದ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ರಾಜ್ಯ ಸರಕಾರಗಳಿಗೆ ಸಲಹೆ ನೀಡಬೇಕು ಮತ್ತು ದ್ವೇಷ ಹರಡುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾವು ನಾವು ಭಾರತದ ಗೌರವಾನ್ವಿತ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರೊಂದಿಗೆ ಮನವಿ ಮಾಡುತ್ತೇವೆ ಎಂದು ಮೌಲಾನಾ ಸೈಯದ್ ಮುಹಮ್ಮದ್ ವಲೀ ರಹ್ಮಾನಿ (ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್), ಸೈಯದ್ ಸರ್ವರ್ ಚಿಸ್ತಿ (ಗಡ್ಡಿ ನಶೀನ್ ಖದೀಮ್, ದರ್ಗಾ ಹಝ್ರತ್ ಖ್ವಾಜಾ ಮೊಯೀನುದ್ದೀನ್ ಚಿಸ್ತಿ , ಅಜ್ಮೀರ್ ಶರೀಫ್), ಮೌಲಾನಾ ಕೆ.ಆರ್. ಸಜ್ಜಾದ್ ನೂಮಾನಿ (ಮುಸ್ಲಿಮ್ ವಿದ್ವಾಂಸ), ಅಡ್ವಕೇಟ್ ಝಫರ್ಯಾಬ್ ಜೀಲಾನಿ (ಹಿರಿಯ ವಕೀಲರು), ನವೈದ್ ಹಮೀದ್ (ಅಧ್ಯಕ್ಷರು, ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್ ಇ ಮುಶಾವರತ್), ಎಂ.ಕೆ.ಫೈಝಿ (ರಾಷ್ಟ್ರೀಯ ಅಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ಡಾ.ಎಸ್.ಕ್ಯು.ಆರ್.ಇಲ್ಯಾಸ್ (ರಾಷ್ಟ್ರೀಯ ಅಧ್ಯಕ್ಷರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಒ.ಎಂ.ಎ.ಸಲಾಂ (ಚೆಯರ್‌ಮೆನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ), ಮುಜ್ತಬಾ ಫಾರೂಕ್ (ಸಾರ್ವಜನಿಕ ಸಂಪರ್ಕ ಮತ್ತು ಸಲಹಾ ಮಂಡಳಿ ನಿರ್ದೇಶಕ, ಜಮಾಅತೇ ಇಸ್ಲಾಮಿ ಹಿಂದ್), ಮೌಲಾನಾ ಉಮ್ರೈನ್ ಮಹ್ಫೂಝ್ ರಹ್ಮಾನಿ (ಕಾರ್ಯದರ್ಶಿ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್), ಕಮಲ್ ಫಾರೂಕಿ ( ಮಾಜಿ ಚೆಯರ್‌ಮೆನ್, ದೆಹಲಿ ಅಲ್ಪಸಂಖ್ಯಾತರ ಆಯೋಗ), ಮೌಲಾನಾ ಉಬೈದುಲ್ಲಾ ಖಾನ್ ಅಝ್ಮಿ (ಮಾಜಿ ಸಂಸದ), ಶಾಹಿದಾ ಅಸ್ಲಂ (ನ್ಯಾಷನಲ್ ವಿಮೆನ್ಸ್ ಫ್ರಂಟ್ ಅಧ್ಯಕ್ಷೆ), ಡಾ. ಅಝ್ಮ ಝೆಹ್ರಾ (ಮುಖ್ಯ ಸಂಘಟಕಿ, ಮಹಿಳಾ ಘಟಕ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್), ಮೆಹರುನ್ನಿಸಾ ಖಾನ್ (ರಾಷ್ಟ್ರೀಯ ಅಧ್ಯಕ್ಷೆ, ವಿಮೆನ್ ಇಂಡಿಯಾ ಮೂವ್‌ಮೆಂಟ್) ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







