ಟ್ರಂಪ್ ಒತ್ತಡಕ್ಕೆ ಹೈಡ್ರಾಕ್ಸಿಕ್ಲೊರೊಕ್ವಿನ್ ರಫ್ತು ನಿಷೇಧ ತೆರವಿನಿಂದ ಮೋದಿ ವರ್ಚಸ್ಸಿಗೆ ಧಕ್ಕೆ
ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧಿಯ ಮೇಲಿನ ನಿಷೇಧವನ್ನು ಅಮೆರಿಕಾದ ಒತ್ತಡಕ್ಕೆ ಮಣಿದು ಭಾಗಶಃ ತೆರವುಗೊಳಿಸಿದ ಭಾರತ ಸರಕಾರದ ಕ್ರಮ ಪ್ರಾಯಶಃ ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸಿಗೆ ಧಕ್ಕೆ ತಂದಿರಬಹುದು ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
"ಟ್ರಂಪ್ ಭಾರತವನ್ನು ಬೆದರಿಸಿದರು ಹಾಗೂ ಭಾರತ ಅವರ ಒತ್ತಡಕ್ಕೆ ಮಣಿಯಿತೆಂಬ ಭಾವನೆ ದೇಶಾದ್ಯಂತ ಮೂಡಿದೆ'' ಎಂದು ವಿರಾಟ್ ಹಿಂದುಸ್ತಾನ್ ಸಂಗಮ್ ಯುಟ್ಯೂಬ್ ಚಾನೆಲ್ ನ ನೇರ ಕಾರ್ಯಕ್ರಮದಲ್ಲಿ ಸ್ವಾಮಿ ಹೇಳಿದರು.
"ಅಮೆರಿಕಾದಲ್ಲಿ ಹೆಚ್ಚುತ್ತಿರುವ ಕೊರೋನ ರೋಗಿಗಳ ಚಿಕಿತ್ಸೆಗೆ ಈ ಔಷಧಿ ಅಗತ್ಯವಾಗಿದೆ ಎಂದು ಟ್ರಂಪ್ ಹೇಳಿ ಭಾರತ ರಫ್ತು ನಿರ್ಬಂಧ ತೆರವುಗೊಳಿಸಿ ಬೇಡಿಕೆ ಈಡೇರಿಸದೇ ಇದ್ದರೆ ಪ್ರತೀಕಾರದ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ ಎರಡೇ ಗಂಟೆಗಳಲ್ಲಿ ರಫ್ತು ನಿರ್ಬಂಧ ಆದೇಶ ತೆರವುಗೊಳಿಸಿ ಅಗತ್ಯವಿರುವ ದೇಶಗಳಿಗೆ ನೀಡಲಾಗುವುದು ಎಂದು ಹೇಳಲಾಗಿತ್ತು'' ಎಂದು ವರ್ಡ್ಸ್ ಆಫ್ ವಿಸ್ಡಂ ಕಾರ್ಯಕ್ರಮದಲ್ಲಿ ಸ್ವಾಮಿ ಹೇಳಿದರು.
"ದುರದೃಷ್ಟವಶಾತ್ ಭಾರತದ ಮಾಧ್ಯಮ ಇದೇ ವಿಚಾರ ಕೈಗೆತ್ತಿಕೊಂಡು 'ಟ್ರಂಪ್ ಬೆದರಿಸಿದರು ಹಾಗೂ ಭಾರತ ಮಣಿಯಿತು' ಎಂದು ಬಿಂಬಿಸಿದೆ. ಇದೇ ಭಾವನೆ ದೇಶದೆಲ್ಲೆಡೆಯಿದೆ, ಗುಜರಾತ್ ರಾಜ್ಯದಲ್ಲೂ ಇದೇ ಭಾವನೆಯಿದೆ ಎಂದು ನನ್ನ ಸ್ನೇಹಿತರಿಂದ ತಿಳಿದು ಬಂತು'' ಎಂದು ಸ್ವಾಮಿ ಹೇಳಿದರು.