ಮೂಡುಬಿದಿರೆ: ಚೌಟರ ಅರಮನೆಯ ನಿರ್ಮಲಾ ವಿ.ರಾಜ್ ನಿಧನ

ಮೂಡುಬಿದಿರೆ : ಇಲ್ಲಿನ ಚೌಟರ ಅರಮನೆಯ ದಿ. ವಿಜಯರಾಜ ಅವರ ಪತ್ನಿ ನಿರ್ಮಲಾ ವಿ.ರಾಜ್ (83) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಅರಮನೆಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪುತ್ರ, ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ್, ಪುತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಅವರ ಪತ್ನಿ ಅನಿತಾ ಸುರೇಂದ್ರ ಕುಮಾರ್ ಸಹಿತ ಬಂಧುವರ್ಗವನ್ನು ಅಗಲಿದ್ದಾರೆ. ಸರಳ ಸೌಜನ್ಯತೆ, ಧಾರ್ಮಿಕ ಶ್ರದ್ಧೆ, ಸಾಮಾಜಿಕ ಕಳಕಳಿಯವರಾಗಿದ್ದ ನಿರ್ಮಲಾ ಅವರು ಕಸೂತಿ ಕಲೆಯಲ್ಲಿ ಪರಿಣತರಾಗಿದ್ದರು.
ಅವರ ನಿಧನಕ್ಕೆ ಮೂಡುಬಿದಿರೆ ಶ್ರೀ ಜೈನಮಠದ ಭಟ್ಟಾರಕ ಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ದಂಪತಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ, ಡಾ.ಎಂ.ಮೋಹನ ಆಳ್ವ, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಉದ್ಯಮಿ ಕೆ.ಶ್ರೀಪತಿ ಭಟ್ ಮತ್ತಿತರರು ಮೃತರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಅರಮನೆಯಲ್ಲಿ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.







