"ಕೊರೋನ ವೈರಸ್: ತಬ್ಲೀಗಿ ಕಾರ್ಯಕ್ರಮವನ್ನು ದೂಷಿಸುವುದಕ್ಕೆ ಯಾವುದೇ ಹುರುಳಿಲ್ಲ"
ಐಎಸ್ಆರ್ ಸಿ ವಿಜ್ಞಾನಿಗಳು

ಹೊಸದಿಲ್ಲಿ: ದೇಶದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ತಬ್ಲೀಗಿ ಜಮಾತ್ ಕಾರ್ಯಕ್ರಮವನ್ನು ದೂಷಿಸುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಇಂಡಿಯನ್ ಸೈಂಟಿಸ್ಟ್ ರೆಸ್ಪೋನ್ಸ್ ಟು ಕೋವಿಡ್ 19 (ಐಎಸ್ ಆರ್ ಸಿ) ಹೇಳಿದೆ.
ಕೆಲವು ಮಾಧ್ಯಮಗಳು ಮತ್ತು ರಾಜಕೀಯ ನಾಯಕರು ತಬ್ಲೀಗಿ ಕಾರ್ಯಕ್ರಮವೇ ಈ ಮಹಾಮಾರಿ ಹರಡಲು ಕಾರಣ ಎಂದು ಹೇಳಿಕೆ ನೀಡುತ್ತಿರುವ ಬಗ್ಗೆ ಐಎಸ್ ಆರ್ ಸಿ ಆತಂಕ ವ್ಯಕ್ತಪಡಿಸಿದೆ.
ಸರಕಾರದಿಂದ ಅನುಮತಿ ಪಡೆದು ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ 2,300ಕ್ಕೂ ಅಧಿಕ ದೇಶ ವಿದೇಶಗಳ ಜನರು ಭಾಗವಹಿಸಿದ್ದರು. ಭಾರತದಲ್ಲಿ ಕೊರೋನ ಪ್ರಕರಣಗಳಲ್ಲಿ 3ನೆ ಒಂದು ಭಾಗ ತಬ್ಲೀಗಿ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿತ್ತು. ಆನಂತರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಕೋಮುದ್ವೇಷವನ್ನು ಹರಡಲಾಗಿತ್ತು. 'ಕೊರೋನ ಜಿಹಾದ್' ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.
"ಈ ವಿಪತ್ತನ್ನು ಕೋಮುವಾದೀಕರಣಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಖಂಡಿಸುತ್ತೇವೆ" ಎಂದು ಐಎಸ್ ಆರ್ ಸಿ ಹೇಳಿದ್ದು, ಕೊರೋನ ವಿಪತ್ತಿಗೆ ಯಾವುದೇ ವರ್ಗ, ಧರ್ಮಗಳನ್ನು ದೂರಬಾರದು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿದೆ. ಕಾರ್ಯಕ್ರಮವನ್ನು ರದ್ದುಗೊಳಿಸದೆ ತಬ್ಲೀಗಿ ಜಮಾಅತ್ ತಪ್ಪು ಮಾಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ತಮ್ಮ ಆಡಳಿತಾತ್ಮಕ ಸಮಸ್ಯೆಗಳನ್ನು ಒಪ್ಪಿಕೊಳ್ಳಬೇಕು ಎಂದಿದೆ.
ಕೊರೋನ ಬಿಕ್ಕಟ್ಟಿನ ನಡುವೆ ಹಲವು ದೇಶಗಳಲ್ಲಿ , ಭಾರತದಲ್ಲೂ ಕೆಲವು ಕಾರ್ಯಕ್ರಮಗಳು ನಡೆದಿವೆ. ಪಂಜಾಬ್ ನಲ್ಲಿ ಒಬ್ಬ ರೋಗಿಯಿಂದ 20 ಗ್ರಾಮಗಳ 40 ಸಾವಿರ ಜನರು ಕ್ವಾರಂಟೈನ್ ನಲ್ಲಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಸೋಂಕಿಗೊಳಗಾದವರು ಸಂತ್ರಸ್ತರೇ ಹೊರತು, ಅವರನ್ನು ದೂರಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.







