ಶೌರ್ಯ ಚಕ್ರ ಪುರಸ್ಕೃತ ಯೋಧನ ಅಂತಿಮ ಸಂಸ್ಕಾರಕ್ಕೆ ಬರಲು ಹೆತ್ತವರಿಗೆ ಸಿಗಲಿಲ್ಲ ಸೇನಾ ವಿಮಾನ !
ಕೇಂದ್ರದ ಕ್ರಮಕ್ಕೆ ವ್ಯಾಪಕ ಅಸಮಾಧಾನ

ಹೊಸದಿಲ್ಲಿ, ಎ.11: ದೇಶದ ಮೂರನೇ ಅತ್ಯುನ್ನತ ಸೇನಾ ಪ್ರಶಸ್ತಿ ಶೌರ್ಯ ಚಕ್ರ ಪುರಸ್ಕೃತರಾಗಿದ್ದ 39 ವರ್ಷ ವಯಸ್ಸಿನ ಅಪ್ರತಿಮ ಯೋಧನ ಅಂತಿಮ ಸಂಸ್ಕಾರಕ್ಕೆ ತಲುಪಲು ಅವರ ಹೆತ್ತವರು 2,600 ಕಿ.ಮಿ.ರಸ್ತೆ ಮೂಲಕ ಪ್ರಯಾಣಿಸುವಂತೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಷ್ಠಿತ 2 ಪ್ಯಾರಾ ಯುನಿಟ್ ನ ಕಮಾಂಡರ್ ಆಗಿದ್ದ ಕರ್ನಲ್ ಎನ್.ಎಸ್ ಬಾಲ್ ಅವರು ಅಪರೂಪದ ಕ್ಯಾನ್ಸರ್ ನಿಂದಾಗಿ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ, ಮತ್ತು ಮಗು ಬೆಂಗಳೂರಿನಲ್ಲೇ ಇದ್ದರೆ ತಂದೆ ತಾಯಿ ಅಮೃತ್ ಸರದಲ್ಲಿದ್ದರು. ಮೃತರ ಅಂತಿಮ ಸಂಸ್ಕಾರವನ್ನು ಬೆಂಗಳೂರಿನಲ್ಲೇ ನೆರವೇರಿಸಲು ಕುಟುಂಬ ನಿರ್ಧರಿಸಿತು. ಲಾಕ್ ಡೌನ್ ನಿಂದಾಗಿ ಬೇರೆ ವಿಮಾನಗಳು ಇಲ್ಲದೇ ಇರುವುದರಿಂದ ಬೆಂಗಳೂರಿಗೆ ತಲುಪಲು ಸೇನಾ ವಿಮಾನ ಒದಗಿಸುವಂತೆ ಕುಟುಂಬ ಕೇಂದ್ರ ಸರಕಾರವನ್ನು ವಿನಂತಿಸಿತ್ತು. ನಿಯಮಗಳ ಪ್ರಕಾರ ಮೃತ ಯೋಧನ ಪಾರ್ಥಿವ ಶರೀರವನ್ನು ವಾಯುಪಡೆಯ ವಿಮಾನದಲ್ಲಿ ಆತನ ಊರಿಗೆ ತಲುಪಿಸಬಹುದು. ಆದರೆ ಆತನ ಮನೆಯವರಿಗೆ ಆ ಸೌಲಭ್ಯ ಕೊಟ್ಟಿರುವ ಪೂರ್ವ ನಿದರ್ಶನವಿಲ್ಲ. ಹಾಗಾಗಿ ಬಾಲ್ ಅವರ ಮನವಿಯನ್ನು ಪರಿಶೀಲಿಸಿದ ಕೇಂದ್ರ ಆ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿತು.
ಇದೀಗ ಬಾಲ್ ಅವರ ಹೆತ್ತವರು ಅಮೃತ್ ಸರದಿಂದ ವಾಹನದ ಮೂಲಕ ಹೊರಟಿದ್ದು 2600 ಕಿಮೀ ರಸ್ತೆ ಮೂಲಕ ಕ್ರಮಿಸಿ ಶನಿವಾರ ರಾತ್ರಿ ಬೆಂಗಳೂರು ತಲುಪಲಿದ್ದಾರೆ.
ಕರ್ನಲ್ ಬಾಲ್ ಅವರು ಅಪ್ರತಿಮ ಯೋಧ ಮತ್ತು ಶ್ರೇಷ್ಠ ಸೇನಾ ನಾಯಕರಾಗಿದ್ದರು ಎಂದು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ನಿವೃತ್ತ ಸೇನಾಧಿಕಾರಿಗಳು ಕೇಂದ್ರ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ. " ನಿಯಮಗಳನ್ನು ಕಲ್ಲಿನ ಮೇಲೆ ಬರೆದಿರುವುದಿಲ್ಲ. ಅವುಗಳನ್ನು ಬದಲಾಯಿಸಬಹುದಿತ್ತು. ಭಾರತ ಸರಕಾರ ಸಹಾಯ ಮಾಡದೇ ಇರುವುದು ಬಹಳ ಬೇಸರ ತಂದಿದೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಅವರು ಟ್ವೀಟ್ ಮಾಡಿದ್ದಾರೆ.
ತಮ್ಮ ನಿಧನದ ಒಂದು ದಿನ ಮೊದಲಷ್ಟೇ ಆಸ್ಪತ್ರೆಯ ಹಾಸಿಗೆಯಿಂದ ಕರ್ನಲ್ ಬಾಲ್ ಒಂದು ಸೆಲ್ಫಿ ಟ್ವೀಟ್ ಮಾಡಿದ್ದರು. ಚಿಕಿತ್ಸೆಗಾಗಿ ಅವರ ಬಲಗೈಯನ್ನು ಕತ್ತರಿಸಿರುವುದು ಅದರಲ್ಲಿ ಕಾಣುತ್ತಿತ್ತು. ಆದರೂ ಬಾಲ್ ಅವರು ಹಸನ್ಮುಖರಾಗಿರುವ ಆ ಚಿತ್ರ ಈಗ ಎಲ್ಲರನ್ನೂ ಕಾಡುತ್ತಿದೆ.







