70 ಲಕ್ಷ ರಕ್ಷಣಾ ಉಪಕರಣಕ್ಕೆ ಬೇಡಿಕೆ: ಪೂರೈಕೆಯಾದದ್ದು 1 ಶೇ. ಕ್ಕೂ ಕಡಿಮೆ !
ಕೊರೋನ ವಿರುದ್ಧದ ಹೋರಾಟ

ಹೊಸದಿಲ್ಲಿ, ಎ.11: ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರ ಬಳಕೆಗಾಗಿ ಕೇಂದ್ರ ಸರಕಾರವು ಬೇಡಿಕೆ ಸಲ್ಲಿಸಿದ್ದ 70 ಲಕ್ಷ ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ)ಗಳ ಪೈಕಿ ಕೇವಲ 55,590 ಅಂದರೆ ಶೇ.1ಕ್ಕೂ ಕಡಿಮೆ ಪಿಪಿಇಗಳನ್ನು ಪೂರೈಸಲು ದೇಶಿಯ ಕಂಪನಿಗಳಿಗೆ ಸಾಧ್ಯವಾಗಿದೆ. ಇದೇ ರೀತಿ 1.01 ಕೋಟಿ ಎನ್95 ಮಾಸ್ಕ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದರೂ ಕೇವಲ 21 ಲಕ್ಷ ಮಾಸ್ಕ್‌ಗಳಷ್ಟೇ ಪೂರೈಕೆಯಾಗಿವೆ ಎಂದು NDTV ವರದಿ ಮಾಡಿದೆ.
ಸರಕಾರಿ ಸ್ವಾಮ್ಯದ,ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿ.ದೇಶಾದ್ಯಂತ ಪಿಪಿಇ ಮತ್ತು ಮಾಸ್ಕ್‌ಗಳ ಖರೀದಿಗೆ ನೋಡಲ್ ಸಂಸ್ಥೆಯಾಗಿದೆ. ಎ.2ರ ಸರಕಾರಿ ಆದೇಶದಂತೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಿಪಿಇಗಳು, ಎನ್ 95 ಮಾಸ್ಕ್‌ಗಳು ಮತ್ತು ವೆಂಟಿಲೇಟರ್‌ಗಳಂತಹ ಮಹತ್ವದ ವೈದ್ಯಕೀಯ ಉಪಕರಣಗಳನ್ನು ನೇರವಾಗಿ ಖರೀದಿಸುವಂತಿಲ್ಲ, ಕೇಂದ್ರ ಆರೋಗ್ಯ ಸಚಿವಾಲಯವೇ ಎಚ್‌ಎಲ್‌ಎಲ್ ಲೈಫ್‌ಕೇರ್ ಮೂಲಕ ಇವುಗಳನ್ನು ಖರೀದಿಸಿ ರಾಜ್ಯಗಳಿಗೆ ವಿತರಿಸಲಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಹಲವಾರು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಪಿಪಿಇ ಕೊರತೆಯನ್ನು ಪ್ರಸ್ತಾಪಿಸಿದ್ದರು.
ಸರಕಾರವು ಈವರೆಗೆ 70 ಲ.ಪಿಪಿಇಗಳ ಪೂರೈಕೆಗಾಗಿ 39 ದೇಶಿಯ ಕಂಪನಿಗಳು ಮತ್ತು 1.01 ಕೋ.ಎನ್95 ಮಾಸ್ಕ್‌ಗಳಿಗಾಗಿ ಮೂರು ದೇಶಿಯ ಕಂಪನಿಗಳಿಗೆ ಬೇಡಿಕೆಗಳನ್ನು ಸಲ್ಲಿಸಿದೆ.
39 ಕಂಪನಿಗಳ ಪೈಕಿ ಕೇವಲ ಎಂಟು ಕಂಪನಿಗಳು ಪಿಪಿಇ ಪೂರೈಕೆಯನ್ನು ಆರಂಭಿಸಿವೆ ಮತ್ತು ಇತರ 31 ಕಂಪನಿಗಳು ಇನ್ನಷ್ಟೇ ಪೂರೈಕೆಯನ್ನು ಆರಂಭಿಸಬೇಕಿವೆ. ಬೇಡಿಕೆಗಳನ್ನು ಸಲ್ಲಿಸುವಲ್ಲಿ ಸರಕಾರದಿಂದ ವಿಳಂಬ ಮತ್ತು ಲಾಕ್‌ಡೌನ್‌ನಿಂದಾಗಿ ಹೇರಲ್ಪಟ್ಟಿರುವ ನಿರ್ಬಂಧಗಳು ಕಳಪೆ ಪ್ರಮಾಣದಲ್ಲಿ ಪೂರೈಕೆಗೆ ಕಾರಣವೆಂದು ಹೆಚ್ಚಿನ ಕಂಪನಿಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಯು ವರದಿ ಮಾಡಿದೆ.
ಪಿಪಿಇಗಳ 39 ದೇಶಿಯ ಪೂರೈಕೆದಾರರ ಪೈಕಿ ಕೇವಲ ಐದು ಕಂಪನಿಗಳಿಗೆ ಲಾಕ್‌ಡೌನ್‌ಗೆ ಮುನ್ನ ಸರಕಾರವು ಬೇಡಿಕೆ ಸಲ್ಲಿಸಿತ್ತು. ಉಳಿದ 34 ಕಂಪನಿಗಳಿಗೆ ಲಾಕ್‌ಡೌನ್ ಜಾರಿಗೊಂಡ ಬಳಿಕ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ಲಾಕ್‌ಡೌನ್‌ಗೆ ಮುನ್ನ ಕೇವಲ 7.8 ಲಕ್ಷ ಪಿಪಿಇಗಳಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು ಎಂದು NDTV ಬೆಟ್ಟು ಮಾಡಿದೆ.
1.01 ಕೋ.ಎನ್95 ಮಾಸ್ಕ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿರುವ ಮೂರು ದೇಶಿಯ ಕಂಪನಿಗಳ ಪೈಕಿ ಒಂದು ಇನ್ನೂ ಪೂರೈಕೆಯನ್ನು ಆರಂಭಿಸಿಲ್ಲ. ಸರಕಾರವು ಐದು ಲಕ್ಷ ಮಾಸ್ಕ್‌ಗಳ ಪೂರೈಕೆಗಾಗಿ ಈ ಕಂಪನಿಗೆ ಎ.7ರಂದು ಬೇಡಿಕೆ ಸಲ್ಲಿಸಿತ್ತು.
ದೇಶೀಯ ಕಂಪನಿಗಳ ಕಳಪೆ ಪೂರೈಕೆ ಸಾಮರ್ಥ್ಯದಿಂದಾಗಿ ಈಗ ಸರಕಾರವು ಈ ವೈದ್ಯಕೀಯ ಉಪಕರಣಗಳ ಪೂರೈಕೆಗಾಗಿ ವಿದೇಶಿ ಕಂಪನಿಗಳತ್ತ ಕಣ್ಣು ಹಾಯಿಸಿದೆ. ಈ ಮೊದಲು ಸಿಂಗಾಪುರದ ಕಂಪನಿಯೊಂದಕ್ಕೆ 80 ಲ.ಪಿಪಿಇಗಳ ಪೂರೈಕೆಗಾಗಿ ಬೇಡಿಕೆ ಸಲ್ಲಿಸಿದ್ದು, ಒಂದೆರಡು ದಿನಗಳಲ್ಲಿ ಅದು ಪೂರೈಕೆಯನ್ನಾರಂಭಿಸುವ ಸುಳಿವುಗಳಿವೆ. ಚೀನಾ ಸೇರಿದಂತೆ ಇತರ ಕೆಲವು ವಿದೇಶಿ ಕಂಪನಿಗಳೊಂದಿಗೂ ಈ ಸಾಧನಗಳ ಖರೀದಿಗಾಗಿ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.







