'ಆರೋಗ್ಯ ಸೇತು ಕೋವಿಡ್-19 ಮೊಬೈಲ್ ಆ್ಯಪ್ ಬಳಸಲು ಸೂಚನೆ'
ಉಡುಪಿ, ಎ.11: ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ದೃಢೀಕೃತ ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು ಬಿಡುಗಡೆಗೊಂಡಿರುವ ‘ಆರೋಗ್ಯ ಸೇತು ಕೋವಿಡ್-19’ ಮೊಬೈಲ್ ಆ್ಯಪ್‌ನ್ನು ಸಾರ್ವಜನಿಕರು, ಸರಕಾರಿ ನೌಕರರು, ಸ್ವಯಂಸೇವಕರು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಆ್ಯಪ್‌ನ್ನು ಐಎಸ್‌ಓ ಹಾಗೂ ಆಂಡ್ರಾಯ್ಡಾ ಸ್ಮಾರ್ಟ್‌ಫೋನ್‌ನಲ್ಲಿ ಬಳಸ ಬಹುದಾಗಿದ್ದು, ಡೌನ್‌ಲೋಡ್ ಮಾಡಿಕೊಂಡ ಬಳಿಕ ಬ್ಲೂಟೂತ್ ಹಾಗೂ ಲೊಕೇಶನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಶನ್ ಎಂದಿರುವುದನ್ನು ‘ಆಲ್‌ವೇಸ್’ ಎಂದು ಕೊಡಬೇಕು ಎಂದವರು ಹೇಳಿದ್ದಾರೆ.
ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಹಾಗೂ ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯುಳ್ಳ ಈ ‘ಆರೋಗ್ಯ ಸೇತು ಕೋವಿಡ್-19’ ಟ್ರಾಕರ್ ಮೊಬೈಲ್ ಆ್ಯಪ್ ಅಳವಡಿಸಿಕೊಂಡರೆ, ನಿಮ್ಮ ಬಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ವ್ಯಕ್ತಿ ಬಂದರೆ ಅಥವಾ ನಿಮಗೆ ಸಮೀಪದಲ್ಲಿ ಇದ್ದರೆ ಕೂಡಲೇ ಆ್ಯಪ್ ಅಲರ್ಟ್ ಮೂಲಕ ನಿಮ್ಮ ಎಚ್ಚರಿಸುತ್ತದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.







