ಕೊರೋನ: ಬೀದಿ ಬದಿ ಮಾರಾಟಗಾರರ ಹಕ್ಕೊತ್ತಾಯಗಳು
ಉಡುಪಿ, ಎ.11:ಕೊರೋನ ಲಾಕ್‌ಡೌನ್‌ನಿಂದಾಗಿ ಬೀದಿ ಬದಿ ಮಾರಾಟಗಾರರ ಜೀವನ ದುಸ್ಥರವಾಗಿದ್ದು ಅವರ ಕುಟುಂಬದ ಜೀವನ ನಿರ್ವಹಣೆಗೆ ದಿನ ಒಂದಕ್ಕೆ 200ರೂ.ನಂತೆ ತಿಂಗಳ ಭತ್ಯೆ ಆರು ಸಾವಿರ ರೂ.ಗಳನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಬೀದಿಬದಿ ಮಾರಾಟಗಾರರ ಫೆಡರೇಷನ್ ಒತ್ತಾಯಿಸಿದೆ.
ನಗರ/ಪಟ್ಟಣಗಳಲ್ಲಿ ಬೀದಿಬದಿಯಲ್ಲಿ ಆಹಾರ ಸಾಮಗ್ರಿ, ಬಟ್ಟೆಬರೆ, ಹೂವು ಮೊದಲಾದ ಸಾಮಗ್ರಿಗಳನ್ನು ಮಾರುವ ಬೀದಿಬದಿ ಮಾರಾಟ ಗಾರರ ಬದುಕು ಕೊರೋನದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಮಾರಾಟಗಾರರು ಸಾಂಸ್ಥಿಕವಲ್ಲದೆ ಲೇವಾದೇವಿದಾರರಿಂದ ಹಣ ಪಡೆದು ವಿಪರೀತ ಬಡ್ಡಿ ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು-ಮೂರು ವಾರಗಳಿಂದ ದುಡಿಮೆ ಇಲ್ಲದ ಕಾರಣ ಇವರ ಸಂಕಟಗಳು ಹೆಚ್ಚಿವೆ. ಬೀದಿಬದಿ ಮಾರಾಟಗಾರರ ಕುಟುಂಬಗಳ ರಕ್ಷಣೆ ಸರಕಾರದ ಹೊಣೆಯಾಗಿರುತ್ತದೆ. ನಗರದ ಬಡವರ ಪಟ್ಟಿಯಲ್ಲಿ ಬರುವ ಈ ಬೀದಿಬದಿ ಮಾರಾಟಗಾರರಿಗೆ ಸೂಕ್ತ ನೆರವು ನೀಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಎಲ್ಲಾ ಬೀದಿಬದಿ ಮಾರಾಟಗಾರರಿಗೆ ಮಾಸ್ಕ್ ಹಾಗೂ ಸ್ಯಾನಟೈಜರ್‌ಗಳನ್ನು ಉಚಿತವಾಗಿ ನೀಡಬೇಕು. ಬೀದಿಬದಿ ಮಾರಾಟಗಾರರ ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೂ ಕೇರಳ ಮಾದರಿಯಂತೆ ಅಗತ್ಯ ಆಹಾರ ಸಾಮಗ್ರಿಗಳನ್ನು ತಕ್ಷಣದಲ್ಲಿ ನೀಡಬೇಕು. ಬೀದಿಬದಿ ಮಾರಾಟ ಗಾರರಿಗೆ ಕೇಂದ್ರ ಸರಕಾರದ ಆದೇಶದನ್ವಯ ಅಗತ್ಯ ಸಾಮಗ್ರಿಗಳ ಪೂರೈಕೆ ಹಾಗೂ ಎಲ್ಲಾ ಬೀದಿಬದಿ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಬೀದಿಬದಿ ಮಾರಾಟಗಾರರ ಫೆಡರೇಷನ್ ರಾಜ್ಯಾಧ್ಯಕ್ಷ ಕೆ.ಎನ್. ಉಮೇಶ್, ಖಜಾಂಚಿ ಬಸಮ್ಮ, ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಜ್ಯ ಸರಕಾರದ ನಗರಾಬಿವೃದ್ದಿ ಇಲಾಖೆ ಸಚಿವ ಬೈರತಿ ಬಸವರಾಜು , ಪೌರಾಡಳಿತ ಸಚಿವ ನಾರಾಯಣ ಗೌಡ, ನಗರಾಬಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ ಮುಂತಾದವರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಫೆಡರೇಷನ್ ಹೇಳಿಕೆಯಲ್ಲಿ ತಿಳಿಸಿದೆ.







