ಕುಂದಾಪುರ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿಗೆ ಮುಗಿಬಿದ್ದ ಜನ : ಪೊಲೀಸರಿಂದ ಲಘು ಲಾಠಿ ಪ್ರಹಾರ
ವ್ಯಾಪಾರಸ್ಥರಿಗೆ ಮಾತ್ರ ಅವಕಾಶ

ಕುಂದಾಪುರ, ಎ.11: ಕೊರೋನ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಂದಾಪುರದ ಶನಿವಾರದ ಸಂತೆ ಬದಲು ಎಪಿಎಂಸಿ ಪ್ರಾಂಗಣದಲ್ಲಿ ಸ್ಥಳೀಯ ಸಣ್ಣ ರಖಂ ವ್ಯಾಪಾರಿಗಳಿಗೆ ಮಾತ್ರ ಖರೀದಿಸಲು ಅವಕಾಶ ಮಾಡಿಕೊಡಲಾದ ಮಾರುಕಟ್ಟೆಗೆ ಇಂದು ಬೆಳಗ್ಗೆ ಜನ ಮುಗಿ ಬಿದ್ದ ಘಟನೆ ನಡೆಯಿತು.
ಕೊರೋನ ಭೀತಿಯಿಂದ ಇಲ್ಲಿನ ವಾರದ ಸಂತೆಯನ್ನು ಮೂರು ವಾರಗಳ ಹಿಂದೆಯೇ ಬಂದ್ ಮಾಡಲಾಗಿತ್ತು. ಅದರ ಬದಲು ಸ್ಥಳೀಯ ಸಣ್ಣ ವ್ಯಾಪಾರಿ ಗಳಿಗೆ ಹಣ್ಣು, ತರಕಾರಿ, ಇನ್ನಿತರ ಅಗತ್ಯ ವಸ್ತುಗಳನ್ನು ರಖಂ ದರದಲ್ಲಿ ಮಾತ್ರ ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬೆಳಗ್ಗೆ 7 ಗಂಟೆ ಸುಮಾರಿಗೆ ಸಂತೆಯ ಗೇಟು ತೆರೆಯುತ್ತಿದ್ದಂತೆ ವ್ಯಾಪಾರಿಗಳು ಮಾತ್ರವಲ್ಲದೆ ಸುತ್ತಮುತ್ತಲಿನ ಪರಿಸರದ ಸಾಕಷ್ಟು ಮಂದಿ ಕೂಡ ಪ್ರಾಂಗಣದೊಳಗೆ ಆಗಮಿಸಿ ತರಕಾರಿಗಳನ್ನು ಖರೀದಿಸಿದರು.
ಹೊರ ಜಿಲ್ಲೆಗಳಿಂದ ಆಗಮಿಸಿದ ಹಣ್ಣು- ತರಕಾರಿ, ಇತರೆ ಸಾಮಾಗ್ರಿಗಳ ವಾಹನಗಳಿಗೆ ಪ್ರಾಂಗಣದೊಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು. ಇದನ್ನು ಗಮನಿಸಿದ ಸ್ಥಳೀಯರು ಸಂತೆ ನಡೆಯಲಿದೆ ಎಂದು ಭಾವಿಸಿ ಪ್ರಾಂಗಣ ದೊಳಗೆ ನುಗ್ಗಿದರು. ನಂತರ ಗೇಟು ಬಂದ್ ಮಾಡಿ, ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಯಿತು.
ಆದರೂ ಕೆಲವರು ವ್ಯಾಪಾರಿಗಳ ಸೋಗಿನಲ್ಲಿ, ಇನ್ನು ಕೆಲವರು ಬೇಲಿ ಹಾರಿ ಕೊಂಡು ಮತ್ತು ಕೆಲವರು ಒಳ ದಾರಿಗಳಿಂದ ಸಂತೆಯೊಳಗೆ ಬರುತ್ತಿರುವುದು ಕಂಡು ಬಂತು. ಅಲ್ಲದೆ ಕೆಲವರು ಎಪಿಎಂಸಿ ಕಂಪೌಂಡ್ ಒಳಗಿರುವ ವ್ಯಾಪಾರಸ್ಥರಿಗೆ ಚೀಟಿ ಕೊಟ್ಟು, ಹೊರಗೆ ನಿಂತು ಸಾಮಾನುಗಳನ್ನು ಖರೀದಿಸಿ ದರು. ಸ್ಥಳದಲ್ಲಿದ್ದ ಎಪಿಎಂಸಿ ಕಾರ್ಯದರ್ಶಿ ದೀಪ್ತಿ ಎಸ್. ಜನರ್ನು ನಿಯಂತ್ರಿಸಲು ಪ್ರಯತ್ನಿಸಿದರು.
ಸುದ್ದಿ ತಿಳಿದ ತತ್‌ಕ್ಷಣ ಸಂತೆ ಮಾರುಕಟ್ಟೆಗೆ ಆಗಮಿಸಿದ ಕುಂದಾಪುರ ಠಾಣಾ ಧಿಕಾರಿ ಹರೀಶ್ ಆರ್. ನೇತೃತ್ವದ ಪೊಲೀಸರು, ಜನರಿಗೆ ಸಂತೆಯಲ್ಲಿ ಜನ ಸೇರುವಂತಿಲ್ಲ ಎಂದು ಮನದಟ್ಟು ಮಾಡುವ ಕೆಲಸ ಮಾಡಿದರು. ಆದರೂ ಜನ ಬರುವುದು ನಿಲ್ಲದಿದ್ದಾಗ ಪೊಲೀಸರು ಗುಂಪು ಕೂಡಿ ತರಕಾರಿ ಖರೀದಿ ಸುತ್ತಿದ್ದ ಜನರನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಕುಂದಾಪುರದ ಸಹಾಯಕ ಆಯುಕ್ತ ಕೆ.ರಾಜು. ಈ ಬಗ್ಗೆ ಪರಿಶೀಲನೆ ನಡೆಸಿದರು. 10ಕೆ.ಜಿ.ಗಿಂತ ಕಡಿಮೆ ಪ್ರಮಾಣದಲ್ಲಿ ತರಕಾರಿಗಳನ್ನು ಖರೀದಿಸುವ ವ್ಯಾಪಾರಿಗಳಿಗೆ ಯಾವುದನ್ನು ಕೂಡ ಮಾರಾಟ ಮಾಡಬಾರದೆಂದು ಪ್ರಾಂಗಣದ ವ್ಯಾಪಾರಸ್ಥರಿಗೆ ಎಸಿ ಸೂಚನೆ ನೀಡಿದರು. ಲಾಕ್‌ಡೌನ್ ಮಧ್ಯೆ ಸಂತೆಗೆ ಆಗಮಿಸುತ್ತಿದ್ದ ಜನರಿಗೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.








