‘ಕೊರೋನದಿಂದ ಸಾಯುವ ಮೊದಲೇ ಹಸಿವಿನಿಂದ ಸಾಯುವಂತಾಗಿದೆ...'
ಕಣ್ಣೀರು ಹಾಕುತ್ತಿದ್ದಾರೆ ಬೆಂಗಳೂರಿನ ವಲಸೆ ಕಾರ್ಮಿಕರು

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.11: "ಕೊರೋನ ಬಂದು ಸಾಯುವ ಮೊದಲೇ ನಾವು ಹಸಿವಿನಿಂದ ಸಾಯುವಂತಾಗಿದೆ. ಊರಿಗೆ ಹೋಗೋದಕ್ಕೂ ಆಗದೇ, ಇಲ್ಲಿ ಬದುಕೋದಕ್ಕೂ ಆಗದೇ ಪರದಾಡುತ್ತಿದ್ದೇವೆ....."
ಇದು ಲಾಕ್ಡೌನ್ನಿಂದಾಗಿ ಬೆಂಗಳೂರಿನ ವಾರ್ಡ್ 169 ನಲ್ಲಿರುವ ವಲಸೆ ಕಾರ್ಮಿಕರ ಅಳಲಾಗಿದೆ. 'ಇದುವರೆಗೂ ಇದ್ದದರಲ್ಲಿಯೇ ಅಡುಗೆ ಮಾಡಿಕೊಂಡು ತಿಂದಿದ್ದೇವೆ. ಆದರೆ, ಈಗ ಮನೆಯಲ್ಲಿಯೂ ಏನು ಇಲ್ಲದೇ ಸಂಕಷ್ಟಪಡುತ್ತಿದ್ದೇವೆ' ಎಂದು ವಲಸೆ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.
ಲಾಕ್ಡೌನ್ನಿಂದ ಬಸ್ಗಳು, ರೈಲುಗಳು ಬಂದ್ ಮಾಡಿದ್ದಾರೆ. ನಮ್ಮನ್ನು ಊರಿಗೆ ಹೋಗೋದಕ್ಕೆ ಬಿಡುತ್ತಿಲ್ಲ. ಆದರೆ, ನಾವು ಇಲ್ಲಿ ಬದುಕೋದಕ್ಕೂ ಆಗುತ್ತಿಲ್ಲ. ನಾವು ಇಲ್ಲಿ ಸಾಯುವುದಕ್ಕಿಂತ ಊರಲ್ಲೇ ಸತ್ತರೆ, ನಮ್ಮವರೆದುರು ಸಾಯ್ತೀವಿ ಅನ್ನೋ ಸಮಾಧಾನವಾದರೂ ಇರುತ್ತದೆ. ಆದರೆ, ನಾವು ಈ ಲಾಕ್ಡೌನ್ ಮುಗಿಯುವುದರೊಳಗೆ ಇಲ್ಲೇ ಸಾಯುತ್ತೇವಾ ಎಂದು ಅನ್ನಿಸಿಬಿಟ್ಟಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
"ಜನಪ್ರತಿನಿಧಿಗಳು ಯಾರೂ ಈ ಕಡೆ ತಲೆ ಹಾಕಿಲ್ಲ. ಒಂದೆರಡು ಬಾರಿ ಬಂದು ಹಾಲು ನೀಡಿ ಫೋಟೋ ತೆಗೆಸಿಕೊಂಡು ಹೋದವರು ಮತ್ತೆ ಯಾರೂ ಈ ಕಡೆ ಬರಲಿಲ್ಲ. ಅಂದಿನಿಂದ ಸರಿಯಾಗಿ ಅನ್ನವನ್ನೇ ತಿನ್ನುತ್ತಿಲ್ಲ. ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳಿಲ್ಲ. ಮನೆಯಲ್ಲಿ ಯಾರಾದರೂ ಅನ್ನ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ಕಾರ್ಮಿಕರೊಬ್ಬರು ಕಣ್ಣೀರು ಹಾಕಿದರು.
ನಾವು ಮನೆಗಳ ಒಳಗೆ ಇರುತ್ತೇವೆ. ಹೊರಗಡೆ ಬಂದರೆ ಬರಬೇಡ ಅನ್ನುತ್ತಾರೆ. ರೋಡುಗಳಲ್ಲಿ ಯಾರಾದರೂ ಅನ್ನ ನೀಡಿದರೆ ಅದನ್ನೇ ತಿಂದು ಬದುಕುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಊರಿಗೆ ಕಳಿಸಿಕೊಡಿ, ನಿಮ್ಮ ಕಾಲಿಗೆ ಬೀಳ್ತೀವಿ ಎಂದು ಗೋಗರೆಯುತ್ತಿರುವ ದೃಶ್ಯಗಳು ಕಂಡುಬಂದವು.
ಸರಕಾರ ಪಡಿತರ ಚೀಟಿ ಇದ್ದವರಿಗೂ, ಇಲ್ಲದವರಿಗೂ ಉಚಿತ ಆಹಾರ ಪದಾರ್ಥಗಳನ್ನು ನೀಡುತ್ತೇವೆ ಎಂದು ಘೋಷಿಸಿದೆ. ಅಲ್ಲದೆ, ಊಟ ನೀಡುವ ಮೂಲಕ ಯಾರೂ ಹಸಿದುಕೊಂಡು ಇರಬಾರದು ಎಂಬುದು ನಮ್ಮ ಧ್ಯೇಯ ಎಂದು ಹೇಳಿದೆ. ಆದರೆ, ಆಳುವ ವರ್ಗ, ಸ್ಥಳೀಯ ಶಾಸಕ ಹಾಗೂ ಸಚಿವರು ಯಾರೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಕಾರ್ಮಿಕರ ಆರೋಪ.







