ಕೇರಳ: ಕೊರೋನ ವೈರಸ್ ಹೆಮ್ಮಾರಿಯ ಅಬ್ಬರವನ್ನಡಗಿಸಿದ್ದು ಹೇಗೆ ?
washingtonpost.com ವಿಶೇಷ ಲೇಖನ

ಆ ಮನೆಗೆ ಭೇಟಿ ನೀಡಿದ್ದ ಆರೋಗ್ಯ ಕಾರ್ಯಕರ್ತೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತ ಉತ್ತರಗಳನ್ನು ಪಡೆದುಕೊಳ್ಳುತ್ತಲೇ ಇದ್ದರು. ನಿಮ್ಮ ಆರೋಗ್ಯ ಸ್ಥಿತಿ ಹೇಗಿದೆ?; ನಿಮ್ಮ ಮನಃಸ್ಥಿತಿ ಹೇಗಿದೆ?; ನಿಮಗೆ ಆಹಾರ ಸಾಮಗ್ರಿಗಳ ಕೊರತೆಯಾಗಿದೆಯೇ ಇವೇ ಇತ್ಯಾದಿ ಪ್ರಶ್ನೆಗಳು ಆಕೆಯ ಕೈಯಲ್ಲಿದ್ದ ಪ್ರಶ್ನಾವಳಿಯಲ್ಲಿದ್ದವು. ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಅಬ್ಬರವನ್ನು ಎದುರಿಸಲು ಕೇರಳದ ಎಡರಂಗ ನೇತೃತ್ವದ ಸರಕಾರವು ಹಮ್ಮಿಕೊಂಡ ದಿಟ್ಟ ಅಭಿಯಾನದ ಭಾಗವಾಗಿರುವ 30,000ಕ್ಕೂ ಅಧಿಕ ಕಾರ್ಯಕರ್ತರಲ್ಲೊಬ್ಬರಾಗಿರುವ ಶೀಬಾ ಟಿ.ಎಂ. ಮಧ್ಯಾಹ್ನದವರೆಗೆ ಕೊರೋನ ವೈರಸ್ ಕ್ವಾರಂಟೈನ್‌ನಲ್ಲಿದ್ದ 50ಕ್ಕೂ ಅಧಿಕ ಜನರನ್ನು ಭೇಟಿಯಾಗಿದ್ದರು. ವಾರದ ಹಿಂದೆ ಈ ಸಂಖ್ಯೆ 200 ಆಗಿತ್ತು.
ನಿರಂತರ ತಪಾಸಣೆಗಳು, ದೀರ್ಘಾವಧಿಯ ಕ್ವಾರಂಟೈನ್ ವ್ಯವಸ್ಥೆ, ದಿಢೀರ್ ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ಅತಂತ್ರರಾಗಿರುವ ವಲಸೆ ಕಾರ್ಮಿಕರಿಗಾಗಿ ಸಾವಿರಾರು ಆಶ್ರಯ ಶಿಬಿರಗಳ ನಿರ್ಮಾಣ ಮತ್ತು ಅಗತ್ಯವುಳ್ಳವರಿಗೆ ಊಟದ ಪೂರೈಕೆ ಇವು ಸರಕಾರದ ಇತರ ಪ್ರಯತ್ನಗಳಲ್ಲಿ ಸೇರಿವೆ.
ಸರಕಾರದ ಈ ದಿಟ್ಟ ಕ್ರಮಗಳು ಈಗ ಫಲ ನೀಡುತ್ತಿರುವಂತೆ ಕಂಡು ಬರುತ್ತಿದೆ. ಕೇರಳವು ಜನವರಿ ಉತ್ತರಾರ್ಧದಲ್ಲಿ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣ ವರದಿಯಾದ ದೇಶದ ಮೊದಲ ರಾಜ್ಯವಾಗಿದ್ದರೂ ಎಪ್ರಿಲ್ ಮೊದಲ ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕಿಂತ ಶೇ.30ರಷ್ಟು ಕಡಿಮೆಯಾಗಿತ್ತು. ಈವರೆಗೆ ಕೇರಳದಲ್ಲಿ ಕೊರೋನ ವೈರಸ್ ಸೋಂಕಿನಿಂದ ಕೇವಲ ಎರಡು ಸಾವುಗಳು ಸಂಭವಿಸಿವೆ. ಶೇ.34ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದು,ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ಗರಿಷ್ಠವಾಗಿದೆ.
ದೇಶಾದ್ಯಂತ ಲಾಕ್‌ಡೌನ್ ಹೇರಿಯೂ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲಾಗದೆ ಹೈರಾಣಾಗಿರುವ ಕೇಂದ್ರ ಸರಕಾರಕ್ಕೆ ಕೇರಳದ ಈ ಯಶಸ್ಸು ಮಾದರಿಯಾಗಬಲ್ಲದು. ಆರಂಭದಲ್ಲೇ ಸೋಂಕು ಪತ್ತೆ ಹಚ್ಚುವಿಕೆ ಮತ್ತು ವಿಶಾಲ ಸಾಮಾಜಿಕ ಬೆಂಬಲ ಕ್ರಮಗಳಂತಹ ಕೇರಳದ ಪೂರ್ವ ನಿಯಾಮಕ ಹೆಜ್ಜೆಗಳು ದೇಶದ ಉಳಿದ ಭಾಗಕ್ಕೆ ಅನುಕರಣೀಯ ಎನ್ನುತ್ತಾರೆ ತಜ್ಞರು.
“ನಾವು ಅತ್ಯುತ್ತಮ ಫಲಿತಾಂಶವನ್ನು ಆಶಿಸಿದ್ದೆವು,ಆದರೆ ಅತ್ಯಂತ ಕೆಟ್ಟ ಸ್ಥಿತಿ ಎದುರಿಸಲು ಯೋಜನೆಯನ್ನು ಹಾಕಿಕೊಂಡಿದ್ದೆವು” ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಈ ಸಾಂಕ್ರಾಮಿಕ ಪಿಡುಗು ಇನ್ನೂ ಅಂತ್ಯಗೊಂಡಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿರುವ ಅವರು, “ಈಗೇನೋ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ನಿಜ,ಆದರೆ ಮುಂದಿನ ವಾರ ಏನಾದೀತು ಎಂದು ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.
ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಕೇರಳದ ನಿಲುವು ಕಠಿಣವಾಗಿತ್ತು,ಜೊತೆಗೆ ಮಾನವೀಯತೆಯಿಂದಲೂ ಕೂಡಿತ್ತು. ನಿರಂತರ ಮತ್ತು ಭರದ ತಪಾಸಣೆ, ಶಂಕಿತರ ಪ್ರತ್ಯೇಕತೆ, ಸಂಪರ್ಕಗಳ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಇವೆಲ್ಲ ಸಾಂಕ್ರಾಮಿಕ ಪಿಡುಗನ್ನು ಹತ್ತಿಕ್ಕುವಲ್ಲಿ ಸೂಕ್ತ ಕ್ರಮಗಳಾಗಿವೆ ಎಂದು ವೈರಾಣು ಶಾಸ್ತ್ರಜ್ಞ ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರು ಹಾಗೂ ಆರೋಗ್ಯ ಸಂಶೋಧನೆ ಪ್ರತಿಷ್ಠಾನವಾಗಿರುವ ವೆಲ್ಕಮ್ ಹೆಲ್ತ್‌ನ ಸಿಇಒ ಆಗಿರುವ ಶಾಹಿದ್ ಜಮೀಲ್ ಅಭಿಪ್ರಾಯಿಸಿದ್ದಾರೆ.
ತುರ್ತು ಸ್ಥಿತಿಗಳ ಸನ್ನದ್ಧತೆಯಲ್ಲಿ ರಾಜ್ಯದ ಹಿಂದಿನ ಅನುಭವ ಮತ್ತು ಹೂಡಿಕೆ ಕೊರೋನ ವೈರಸ್‌ಗೆ ಕೇರಳ ನೀಡಿರುವ ತಕ್ಕ ಉತ್ತರದ ಹಿಂದಿದೆ ಎಂದಿರುವ ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪ್ರತಿನಿಧಿ ಹೆಂಕ್ ಬೆಕೆಡಮ್ ಅವರು, ಜಿಲ್ಲೆಗಳಲ್ಲಿ ನಿಗಾ,ಅಪಾಯದ ಕುರಿತು ಸಂವಹನಗಳು ಮತ್ತು ಸಮುದಾಯದ ತೊಡಗುವಿಕೆಯಂತಹ ಕ್ರಮಗಳು ಕೇರಳದ ಯಶಸ್ಸಿಗೆ ಕಾರಣಗಳಾಗಿವೆ ಎಂದು ಬೆಟ್ಟು ಮಾಡಿದ್ದಾರೆ.
ಕೊರೋನ ವೈರಸ್‌ನಿಂದಾಗಿ ಅತ್ಯಧಿಕ ಸಂಖ್ಯೆಯ ವಿದೇಶಿ ಪ್ರವಾಸಿಗಳ ರೂಪದಲ್ಲಿ ಕೇರಳಕ್ಕೆ ಸಂಭಾವ್ಯ ವಿನಾಶಕಾರಿ ಸವಾಲು ಎದುರಾಗಿತ್ತು. ಹಿನ್ನೀರಿನ ಸೊಬಗು, ರಮಣೀಯ ನಿಸರ್ಗ ಸೌಂದರ್ಯ ಮತ್ತು ಆರೋಗ್ಯ ಕೇಂದ್ರಗಳಿಂದಾಗಿ ಈ ಕರಾವಳಿ ರಾಜ್ಯಕ್ಕೆ ಪ್ರತಿವರ್ಷ ಹತ್ತು ಲಕ್ಷಕ್ಕೂ ವಿದೇಶಿ ಪ್ರವಾಸಿಗಳು ಭೇಟಿ ನೀಡುತ್ತಾರೆ. ಅದರ 330 ಲಕ್ಷ ಜನಸಂಖ್ಯೆಯಲ್ಲಿ ಆರರಲ್ಲೊಂದು ಭಾಗ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ ಮತ್ತು ಅದರ ನೂರಾರು ವಿದ್ಯಾರ್ಥಿಗಳು ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಭಾರತವು ಕೊರೋನ ವೈರಸ್ ಕ್ರಮಗಳನ್ನು ತೆಗೆದುಕೊಳ್ಳುವ ಎರಡು ವಾರಗಳ ಮೊದಲೇ ಅಂದರೆ ಫೆ.10ರಿಂದಲೇ ಕೇರಳ ತನ್ನ ವಿಮಾನ ನಿಲ್ದಾಣಗಳಲ್ಲಿ ವೈರಸ್ ತಪಾಸಣೆಗಳನ್ನು ಕಟ್ಟುನಿಟ್ಟುಗೊಳಿಸಿತ್ತು ಮತ್ತು ಇರಾನ್ ಹಾಗೂ ದಕ್ಷಿಣ ಕೊರಿಯಾದಂತಹ ಕೊರೋನ ವೈರಸ್ ಹಾಟ್ ಸ್ಪಾಟ್‌ಗಳು ಸೇರಿದಂತೆ ಒಂಭತ್ತು ದೇಶಗಳ ಪ್ರವಾಸಿಗಳಿಗೆ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿತ್ತು. ಡಝನ್‌ಗೂ ಅಧಿಕ ವಿದೇಶಿ ಪ್ರಜೆಗಳು ತಮ್ಮ ಐಸೋಲೇಷನ್ ಅವಧಿಯನ್ನು ಪೂರ್ಣಗೊಳಿಸಿರಲಿಲ್ಲವೆಂಬ ಕಾರಣಕ್ಕೆ ಅವರನ್ನು ಟೇಕಾಫ್‌ಗಿಂತ ಮೊದಲು ವಿಮಾನದಿಂದ ಕೆಳಕ್ಕಿಳಿಸಿದ್ದು ಕೇರಳ ಸರಕಾರದ ಕಾಳಜಿಗೊಂದು ಉದಾಹರಣೆಯಾಗಿದೆ. ಪ್ರವಾಸಿಗಳು ಮತ್ತು ಇತರ ಅನಿವಾಸಿಗಳನ್ನಿರಿಸಲು ತಾತ್ಕಾಲಿಕ ಕ್ವಾರಂಟೈನ್ ಶಿಬಿರಗಳನ್ನು ಸರಕಾರವು ಸ್ಥಾಪಿಸಿತ್ತು.
ಸರಕಾರವು ಇಷ್ಟೆಲ್ಲ ಕಟ್ಟುನಿಟ್ಟು ವಹಿಸಿದ್ದರೂ ಕೆಲವರು ನುಣುಚಿಕೊಂಡಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಇಟಲಿಯಿಂದ ಮರಳಿದ್ದ ಕೇರಳಿಯ ದಂಪತಿ ಆರೋಗ್ಯಾಧಿಕಾರಿಗಳಿಗೆ ವರದಿ ಮಾಡಿಕೊಂಡಿರಲಿಲ್ಲ ಮತ್ತು ಇದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿತ್ತು. ಅವರನ್ನು ಪತ್ತೆ ಹಚ್ಚುವ ವೇಳೆಗಾಗಲೇ ದಂಪತಿ ಹಲವಾರು ಸಾಮಾಜಿಕ ಸಮಾವೇಶಗಳಲ್ಲಿ ಭಾಗಿಯಾಗಿದ್ದರು ಮತ್ತು ವ್ಯಾಪಕ ಪ್ರವಾಸಗಳನ್ನು ಕೈಗೊಂಡಿದ್ದರು. ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಕೇರಳ ಸರಕಾರವು ದಂಪತಿಯ ಸಂಪರ್ಕಕ್ಕೆ ಬಂದಿದ್ದ ಸುಮಾರು 900 ಜನರನ್ನು ಗುರುತಿಸಿ ಅವರನ್ನು ಐಸೋಲೇಷನ್‌ಗೆ ಒಳಪಡಿಸಿತ್ತು.
ದಂಪತಿಯ ಅಳಿಯ ರಾಬಿನ್ ಥಾಮಸ್ ಸೇರಿದಂತೆ ಆ ಕುಟುಂಬದ ನಾಲ್ವರಲ್ಲಿಯೂ ಸೋಂಕು ಪತ್ತೆಯಾಗಿತ್ತು. ತಮಗೆ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲಾಗಿತ್ತು ಮತ್ತು ಸಾಮಾಜಿಕ ಕಳಂಕವನ್ನು ಎದುರಿಸಲು ವೈದ್ಯಕೀಯ ಸಿಬ್ಬಂದಿ ನೆರವಾಗಿದ್ದರು ಎಂದು ಥಾಮಸ್ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.
ವೈರಸ್ ನಿಯಂತ್ರಣಕ್ಕಾಗಿ ಆರು ರಾಜ್ಯಗಳು ಕೇರಳದ ಸಲಹೆಯನ್ನು ಕೋರಿವೆ. ಆದರೆ ಕೇರಳದ ಮಾದರಿಯನ್ನು ದೇಶದ ಇತರೆಡೆಗಳಲ್ಲಿ ಅನುಸರಿಸುವುದು ಸುಲಭವಲ್ಲ ಎನ್ನುತ್ತಾರೆ ಶೈಲಜಾ. 30 ವರ್ಷಕ್ಕೂ ಹೆಚ್ಚಿನ ಕಮ್ಯುನಿಸ್ಟ್ ಆಡಳಿತದಲ್ಲಿ ರಾಜ್ಯವು ಶಿಕ್ಷಣ ಮತ್ತು ಸಾರ್ವತ್ರಿಕ ಆರೋಗ್ಯ ಕ್ಷೇತ್ರದಲ್ಲೀ ಭಾರೀ ಹೂಡಿಕೆಯನ್ನು ಮಾಡಿದೆ. ಕೇರಳ ಇಂದು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಾಕ್ಷರತೆಯನ್ನು ಹೊಂದಿದೆ ಮತ್ತು ಅದರ ಸಾರ್ವಜನಿಕ ಆರೊಗ್ಯ ವ್ಯವಸ್ಥೆ ದೇಶದಲ್ಲಿಯೇ ಅತ್ಯುತ್ತಮವಾಗಿದೆ.
ತ್ವರಿತ ಪರೀಕ್ಷಾ ಕಿಟ್‌ಗಳನ್ನು ಒದಗಿಸುವಲ್ಲಿಯೂ ಕೇರಳ ಅಗ್ರಸ್ಥಾನದಲ್ಲಿದ್ದು,ಸಮುದಾಯ ಹರಡುವಿಕೆಯನ್ನು ತಡೆಯಲು ಹಾಟ್‌ಸ್ಪಾಟ್‌ಗಳಲ್ಲಿ ಇವುಗಳ ಬಳಕೆಯನ್ನು ಮುಂದುವರಿಸಿ ರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವಾರ ಕೇರಳವು ವಾಕ್-ಇನ್ ತಪಾಸಣಾ ಸೌಲಭ್ಯಗಳನ್ನು ಆರಂಭಿಸಿದ್ದು,ಇದು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣಾ ಉಪಕರಣಗಳ ಅಗತ್ಯವನ್ನು ತಗ್ಗಿಸಿದೆ.
ಕೇಂದ್ರವು ಲಾಕ್‌ಡೌನ್ ಹೇರುವ ಮೊದಲೇ ಕೇರಳವು 2.6 ಶತಕೋಟಿ ಡಾ.ಗಳ ಆರ್ಥಿಕ ಪ್ಯಾಕೇಜ್‌ನ್ನು ಪ್ರಕಟಿಸಿತ್ತು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು.







