ಉಡುಪಿ: ಜಿಲ್ಲೆಯ ಮೊದಲ ಕೊರೋನ ವೈರಸ್ ಸೋಂಕಿತ ಆಸ್ಪತ್ರೆಯಿಂದ ಬಿಡುಗಡೆ

ಸಾಂದರ್ಭಿಕ ಚಿತ್ರ
ಉಡುಪಿ, ಎ.11: ಉಡುಪಿ ಜಿಲ್ಲೆಯಲ್ಲಿ ಮೊತ್ತ ಮೊದಲನೇಯವರಾಗಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾದ ಮಣಿಪಾಲದ 34ರ ಹರೆಯದ ಯುವಕ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಹಾಗೂ ಆತನ ಗಂಟಲ ದ್ರವ ಮಾದರಿಗಳು ನೆಗೆಟಿವ್ ಆಗಿ ಬಂದ ಹಿನ್ನೆಲೆಯಲ್ಲಿ ಆತನನ್ನು ಶನಿವಾರ ರಾತ್ರಿ 9:10ಕ್ಕೆ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರುವಂತೆ ಆತನಿಗೆ ಕಟ್ಟುನಿಟ್ಟಿನ ಸಲಹೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇದಕ್ಕೆ ಮೊದಲ ಶನಿವಾರ ಸಂಜೆ, ಎ.8ಕ್ಕೆ ಕಳುಹಿಸಿದ ಈತನ ಎರಡನೇ ಸ್ಯಾಂಪಲ್ ವರದಿ ನೆಗೆಟಿವ್ ಆಗಿ ಬಂದಿತ್ತು. ಇದರಿಂದ 24ಗಂಟೆಗಳ ಅಂತರದಲ್ಲಿ ಪಡೆದ ಆತನ ಎರಡು ಸ್ಯಾಂಪಲ್ಗಳು ನೆಗೆಟಿವ್ ಆಗಿ ಬಂದ ಹಿನ್ನೆಲೆಯಲ್ಲಿ ಆತನನ್ನು ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆಗೊಳಿ ಸಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.
ಕಳೆದ ಸೋಮವಾರ ಹಾಗೂ ಬುಧವಾರ ತೆಗೆದುಕೊಂಡ ಆತನ ಎರಡೂ ಮಾದರಿಗಳು ಸೋಂಕಿಗೆ ನೆಗೆಟಿವ್ ಆಗಿರುವುದರಿಂದ, ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಹೀಗಾಗಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಯಿತು ಎಂದರು.
ಮೂಲತ: ದಾವಣಗೆರೆಯ ಈ ಯುವಕ ಮಣಿಪಾಲದಲ್ಲಿ ಲಾಬ್ ಟೆಕ್ನಿಷಿಯನ್ ಆಗಿದ್ದು, ಮಾ.13ರಂದು ಪ್ರವಾಸಕ್ಕೆಂದು ದುಬೈಗೆ ತೆರಳಿ ಮಾ.18ರಂದು ಮಣಿಪಾಲಕ್ಕೆ ಮರಳಿ ಬಂದು ಮಾ.23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಮಾ. 26ರಂದು ಈತನ ಗಂಟಲ ದ್ರವದ ಮಾದರಿ ಪರೀಕ್ಷೆ ಕೊರೋನ ಪಾಸಿಟಿವ್ ಆಗಿ ಬಂದಿತ್ತು. ಅನಂತರ ಈತನಿಗೆ ಮೊದಲು ಕೆಎಂಸಿ, ಬಳಿಕ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಉಳಿದಿಬ್ಬರು ಸೋಂಕಿತರ ಸ್ಯಾಂಪಲ್ ಪರೀಕ್ಷೆ
ಈ ನಡುವೆ ಮಾ.29ರಂದು ಸೋಂಕು ಪತ್ತೆಯಾದ ಉಡುಪಿ ಆಸುಪಾಸಿನ ಇಬ್ಬರು ಯುವಕರ ಗಂಟಲು ದ್ರವದ ತಲಾ ಎರಡು ಮಾದರಿಗಳನ್ನು 24 ಗಂಟೆಗಳ ಅಂತರದಲ್ಲಿ ಸಂಗ್ರಹಿಸಿ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಇಬ್ಬರ ತಲಾ ಎರಡು ಮಾದರಿಗಳ ವರದಿ ಇನ್ನಷ್ಟೆ ಬರಬೇಕಿದೆ. ಇಬ್ಬರ ಎರಡೂ ವರದಿಗಳು ನೆಗೆಟಿವ್ ಆಗಿ ಬಂದರೆ ಸೋಮವಾರದ ವೇಳೆಗೆ ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗು ವುದು ಎಂದು ಡಾ.ಸೂಡ ವಿವರಿಸಿದರು.
ಉತ್ತರ ಕನ್ನಡದ ಭಟ್ಕಳದಿಂದ ಗುರುವಾರ ರಾತ್ರಿ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾದ ಕೊರೋನ ಸೊಂಕಿತ 26ರ ಹರೆಯದ ಗರ್ಭಿಣಿ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತಿದ್ದಾರೆ. ಅವರ ಗಂಟಲು ದ್ರವದ ಮಾದರಿ ಪರೀಕ್ಷೆಯನ್ನು ಇಲ್ಲೇ ನಡೆಸಲಾಗುವುದು ಎಂದೂ ಅವರು ಹೇಳಿದರು.







