ವಾಹನಗಳ ಮೇಲೆ ಹೆಚ್ಚಿನ ನಿಗಾ : ಪೊಲೀಸ್ ಆಯುಕ್ತ ಡಾ. ಹರ್ಷ
ಲಾಕ್‌ಡೌನ್
ಮಂಗಳೂರು, ಎ.11: ಕೊರೋನ ಜಾಗೃತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೂಡ ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ವಾಹನಗಳ ಮೇಲೆ ವಿಶೇಷ ನಿಗಾ ಇಡಲಾಗುವುದು. ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ತಿಳಿಸಿದ್ದಾರೆ.
ಪಾಸ್ ದುರ್ಬಳಕೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಶನಿವಾರದಿಂದ ನಗರ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ಮತ್ತಷ್ಟು ಕಠಿಣಗೊಳಿಸಿದ್ದಾರೆ. ವಿಭಾಗೀಯ ದಂಡಾಧಿಕಾರಿ, ವಾರ್ತಾಧಿಕಾರಿ ನೀಡಿದ ಪಾಸ್ ಸೇರಿದಂತೆ ಜಿಲ್ಲಾಡಳಿತದ ಅಧಿಕೃತ ಪಾಸ್ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಉಳಿದ ಯಾವುದೇ ಪಾಸ್ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನ್ಯಾಯಾಲಯಕ್ಕೆ ಹಾಜರು: ಮುಟ್ಟುಗೋಲು ಹಾಕಿದ ವಾಹನಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜುರಪಡಿಸಲಾ ಗುತ್ತದೆ. ಲಾಕ್‌ಡೌನ್ ಮುಗಿದ ಬಳಿಕ ಕೋರ್ಟ್‌ನಿಂದಲೇ ಆ ವಾಹನ ಬಿಡುಗಡೆ ಮಾಡಬೇಕಾಗಿದೆ. ಈ ಹಿಂದೆ ದಂಡ ಕಟ್ಟಿ ವಾಹನ ಬಿಡುವ ನಿರ್ಧಾರ ಬದಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ ಸಮೀಪವೇ ಖರೀದಿಸಿ. ಒಂದು ವೇಳೆ ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳಬೇಕಾದರೆ ಜಿಲ್ಲಾಡಳಿತದ ಅಧಿಕೃತ ಪಾಸ್ ಹೊಂದಿದವರಿಗೆ ಮಾತ್ರ ಅವಕಾಶ ಎಂದು ಪೊಲೀಸರು ತಿಳಿಸಿದ್ದಾರೆ.







