ಲಾಕ್‌ಡೌನ್ ಉಲ್ಲಂಘಿಸಿ ಬರ್ತ್‌ಡೇ ಪಾರ್ಟಿ: ಬಿಜೆಪಿ ಕಾರ್ಪೊರೇಟರ್ ಸೇರಿ 11 ಜನರ ಬಂಧನ

ಮುಂಬೈ, ಎ.11: ಲಾಕ್‌ಡೌನ್ ನಡುವೆಯೇ ಶುಕ್ರವಾರ ರಾತ್ರಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿ ಬಿಜೆಪಿ ಕಾರ್ಪೊರೇಟರ್ ಓರ್ವರ ಹುಟ್ಟುಹಬ್ಬದ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಕಾರ್ಪೊರೇಟರ್ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.
ಇವರೆಲ್ಲ ಪನ್ವೇಲ್ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಅಜಯ ಬಹಿರಾ (42) ಅವರ ಹುಟ್ಟುಹಬ್ಬದ ಆಚರಣೆಗಾಗಿ ಟಕ್ಕಾ ಗ್ರಾಮದ ವಸತಿ ಕಟ್ಟಡವೊಂದರ ತಾರಸಿಯಲ್ಲಿ ಸೇರಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ ಎಂದು ಪನ್ವೇಲ್ ಠಾಣಾಧಿಕಾರಿ ಅಜಯಕುಮಾರ ಲಾಂಡ್ಗೆ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಾರ್ಟಿಯಲ್ಲಿ ಮದ್ಯವನ್ನು ಪೂರೈಸಲಾಗುತ್ತಿತ್ತು. ಅವರು ಮಾಸ್ಕ್‌ಗಳನ್ನು ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.
ಬಂಧಿತರನ್ನು ಬಳಿಕ ಜಾಮೀನು ಬಿಡುಗಡೆಗೊಳಿಸಲಾಗಿದೆ.
Next Story





