ಗದಗ ಜಿಲ್ಲೆಯಲ್ಲಿ ವೃದ್ಧೆ ಸಾವು ಪ್ರಕರಣ: ಕೊರೋನ ಸೋಂಕಿನ ಮೂಲ ಇನ್ನೂ ನಿಗೂಢ

ಸಾಂದರ್ಭಿಕ ಚಿತ್ರ
ಗದಗ, ಎ.11: ಲಾಕ್ಡೌನ್ ಘೋಷಣೆಯಾದ ಬಳಿಕ ಗದಗ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಆದರೆ, ಇವರೆಗೂ ವೃದ್ಧೆಗೆ ಹೇಗೆ ಸೋಂಕು ತಗುಲಿತು ಎನ್ನುವುದನ್ನು ಪತ್ತೆ ಹಚ್ಚುವುದೇ ಜಿಲ್ಲಾಡಳಿಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ.
ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧೆ ವಾಸವಿದ್ದ ಗದಗ ನಗರದ 31ನೆ ವಾರ್ಡ್ ವ್ಯಾಪ್ತಿಯ ರಂಗನವಾಡ ಪ್ರದೇಶ ಮತ್ತು ಅದರ ಎದುರಿಗೆ ಇರುವ 30ನೆ ವಾರ್ಡ್ ವ್ಯಾಪ್ತಿಯ ಉಡಚಮ್ಮನ ದೇವಸ್ಥಾನ ಪ್ರದೇಶವನ್ನು ಜಿಲ್ಲಾಡಳಿತ ಎ.7ರಿಂದಲೇ ಕಂಟೈನ್ಮೆಂಟ್ ಎಂದು ಘೋಷಿಸಿದೆ. ಆದರೆ, ನಿರ್ಬಂಧಕ್ಕೆ ಒಳಗಾದ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳು, ಕುಡಿಯಲು ನೀರು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಜಿಲ್ಲೆಯ ಜನರು ಆರಂಭದ ದಿನಗಳಲ್ಲಿ ಲಾಕ್ಡೌನ್ ಅನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೊದಲೆರಡು ವಾರ ದಿನಸಿ, ತಕಾರಿ ಖರೀದಿ ಹೆಸರಿನಲ್ಲಿ ರಸ್ತೆಗಿಳಿಯುವುದು ಸಾಮಾನ್ಯವಾಗಿತ್ತು. ಆದರೆ, ಎ.8ರಂದು, ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ವೃದ್ಧೆ ಮೃತಪಟ್ಟ ಬಳಿಕ ಇಡೀ ಜಿಲ್ಲೆಯ ಚಿತ್ರಣ ಬದಲಾಯಿತು. ಎ.9 ಮತ್ತು 10ರಂದು ಗದಗ ಬೆಟಗೇರಿ ಅವಳಿ ನಗರ ಸೇರಿ ಇಡೀ ಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು.





