ದೇಶಾದ್ಯಂತ ಒಂದು ಲಕ್ಷ ಹಾಸಿಗೆಗಳೊಂದಿಗೆ 586 ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆಗೆ ಸಿದ್ಧ

ಹೊಸದಿಲ್ಲಿ, ಎ.11: ದೇಶಾದ್ಯಂತ ಒಟ್ಟು 586 ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳೆಂದು ಗುರುತಿಸಲಾಗಿದ್ದು,ಕೊರೋನ ವೈರಸ್ ರೋಗಿಗಳಿಗಾಗಿ ಒಂದು ಲಕ್ಷಕ್ಕೂ ಅಧಿಕ ಪ್ರತ್ಯೇಕ ಹಾಸಿಗೆಗಳು ಮತ್ತು 11,500 ಐಸಿಯು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ದೇಶಾದ್ಯಂತ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 7,529ಕ್ಕೆ ಮತ್ತು ಮೃತರ ಸಂಖ್ಯೆ 242ಕ್ಕೆ ಏರಿಕೆಯಾಗಿವೆ. ದೇಶದಲ್ಲಿ ಕೊರೋನ ಹಾಟ್ ಸ್ಪಾಟ್‌ಗಳನ್ನು ಗುರುತಿಸಲು ಸರಕಾರವು ಬೇಗನೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಲಾಕ್‌ಡೌನ್ ಮತ್ತು ಇತರ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿರದಿದ್ದರೆ ಎ.15ರ ವೇಳೆಗೆ ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 8.2 ಲಕ್ಷವನ್ನು ದಾಟಬಹುದಿತ್ತು ಎಂದರು.
ಪ್ರಕರಣಗಳಲ್ಲಿ ಬೆಳವಣಿಗೆಯ ದರದ ಕುರಿತು ನಾವು ವಿಶ್ಲೇಷಣೆಯನ್ನು ನಡೆಸಿದ್ದೇವೆ. ಮಾ.22ರಂದು ಜನತಾ ಕರ್ಫ್ಯೂ ಆಚರಿಸಲಾಗಿದ್ದು, ಮಾ.25ರಂದು ಲಾಕ್‌ಡೌನ್ ವಿಧಿಸಲಾಗಿದೆ. ಅಂಕಿಅಂಶಗಳ ವಿಶ್ಲೇಷಣೆಯಂತೆ ಲಾಕ್‌ಡೌನ್ ಮತ್ತು ಇತರ ನಿಯಂತ್ರಣ ಕ್ರಮಗಳ ಅನುಪಸ್ಥಿತಿಯಲ್ಲಿ ಎ.15ರ ವೇಳೆಗೆ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 8.2 ಲಕ್ಷ ಆಗುವ ಸಾಧ್ಯತೆಯಿತ್ತು ಎಂದರು.
ಸಾಮಾಜಿಕ ಅಂತರ,ಲಾಕ್‌ಡೌನ್ ಮತ್ತು ಇತರ ನಿಯಂತ್ರಣ ಕ್ರಮಗಳು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಖ್ಯವಾಗಿವೆ ಎಂದ ಅವರು,ದೇಶದಲ್ಲಿ ಕೊರೋನ ವೈರಸ್ ಸೋಂಕನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಮಲೇರಿಯಾ ನಿರೋಧಕ ಔಷಧಿ ಹೈಡಾಕ್ಸಿಕ್ಲೋರೊಕ್ವಿನ್ ಕೊರತೆಯಿಲ್ಲ ಎಂದು ತಿಳಿಸಿದರು.







