ನೌಕರರು ಗುಣಮುಖರಾಗುವವರೆಗೂ ಜ್ಯುಬಿಲಿಯಂಟ್ ಕಂಪೆನಿ ಪ್ರಾರಂಭ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಎ.11: ಜ್ಯಬಿಲಿಯಂಟ್ ಕಂಪನಿಯ ಎಲ್ಲಾ ನೌಕರರು ಸಂಪೂರ್ಣ ಗುಣಮುಖರಾಗುವವರೆಗೂ ಕಂಪನಿ ಪ್ರಾರಂಭಕ್ಕೆ ಅವಕಾಶವಿಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖ್ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಕೊರೋನ ಸೋಂಕು ಹರಡಲು ಕಾರಣವಾದ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜ್ಯಬಿಲಿಯಂಟ್ ಕಂಪನಿ ಆವರಣಕ್ಕೆ ಶನಿವಾರ ಖುದ್ದು ಭೇಟಿ ನೀಡಿ ಪರೀಶೀಲಿಸಿದ ಸಚಿವರು, ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ಹರಡಲು ಕಾರಣವಾದ ಜ್ಯಬಿಲಿಯಂಟ್ ಕಂಪನಿಯ ಎಲ್ಲಾ ನೌಕರರನ್ನು ಪರೀಕ್ಷಿಸಲಾಗುವುದು. ಆ ವರದಿ ಬಂದ ನಂತರ ಕಂಪನಿ ಪ್ರಾರಂಭದ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಸುಮಾರು 20 ಮಂದಿ ಸೆಕ್ಯುರಿಟಿ ಅವರನ್ನು ಕಾರ್ಖಾನೆ ಒಳಗೇ ಕ್ವಾರಂಟೈನ್ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಇವರೆಲ್ಲರೂ ಸೆಕೆಂಡರಿ ಕಾಂಟಾಕ್ಟ್ ಆಗಿದ್ದು, ಆದರೂ ಆರೋಗ್ಯದ ದೃಷ್ಠಿಯಿಂದ ಕ್ರಮ ಕೈಗೊಂಡಿದ್ದಾಗಿ ಜಿಲ್ಲಾದಿಕಾರಿ ಅಭಿರಾಮ್ ಜಿ.ಶಂಕರ್ ಸಚಿವರಿಗೆ ತಿಳಿಸಿದರು.
ಜಿಲ್ಲೆ ಹಾಗು ತಾಲೂಕು ಕೊರೋನ ಮುಕ್ತಗೊಳ್ಳಲು ಬೇಕಾದ ಅನುಕೂಲಗಳನ್ನು ಸರ್ಕಾರದ ವತಿಯಿಂದ ಮಾಡಿಸಿಕೊಡುತ್ತೇನೆ. ಯಾವ ಸಮಯದಲ್ಲಿ ಬೇಕಾದರೂ ನನ್ನ ಸಹಕಾರ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಜ್ಯುಬಿಲಿಯಂಟ್ ಕಂಪನಿಗೆ ಭೇಟಿ ನೀಡಿದ ಬಳಿಕ ಹೋಂ ಕ್ವಾರಂಟೈನ್ ಪ್ರದೇಶಗಳಿಗೆ ತೆರಳಿ ಅಲ್ಲಿನ ವಸ್ತುಸ್ಥಿತಿಯನ್ನು ವೀಕ್ಷಿಸಿಕದರು. ನಂತರ ಜ್ಯಬಿಲಿಯಂಟ್ ನೌಕರರೇ ಹೆಚ್ಚು ವಾಸಿಸುತ್ತಿರುವ ಕೆ.ಎಚ್.ಬಿ.ಕಾಲೋನಿ ಹಿಂಭಾಗದಲ್ಲಿರುವ ದೇವಿರಮ್ಮನ ಹಳ್ಳಿ ಬಡಾವಣೆಯ ಜ್ಯಬಿಲಿಯಂಟ್ ಲೇಔಟ್‍ಗೆ ಭೇಟಿ ನೀಡಿ ಹೋಂ ಕ್ವಾರಂಟೈನ್‍ಗಳ ಯೋಕ್ಷೇಮ ವಿಚಾರಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ವಾಟ್ಸ್ ಆ್ಯಪ್ ಗ್ರೂಪ್‍ಗಳನ್ನು ರಚಿಸಿ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಭಯ ಹೋಗಲಾಡಿಸುವುದು. ಈ ಪ್ರದೇಶಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಬೇಕು, ಎಲ್ಲರ ಮನೆಗಳಿಗೆ ಜಾಗೃತಿ ಬಿತ್ತಿಪತ್ರಗಳನ್ನು ಅಚಿಟಿಸುವ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜೊತೆಗ ಸ್ಯಾನಿಟೈಸರ್‍ಗಳ ವಿತರಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ನಂತರ ಬಿಕ್ಷುಕರು, ಅನಾಥರು, ನಿರಾಶ್ರಿತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿರುವ ಲಿಂಗಣ್ಣನವರ ಛತ್ರಕ್ಕೆ ಭೇಟಿ ನೀಡಿದ ಸಚಿವರು, ಆರೋಗ್ಯ ವಿಚಾರಿಸಿದರು. ಅಲ್ಲದೆ, ಇಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪ್ರಾರ್ಥನೆ ಸಲ್ಲಿಸಿದ ಸಚಿವರು
ನಂಜನಗೂಡು ಶ್ರೀನಂಜುಂಡೇಶ್ವರಸ್ವಾಮಿ ದೇವರ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ನಾಡಿನ ಜನತೆಯನ್ನು ಶೀಘ್ರವಾಗಿ ಕೊರೋನ ಎಂಬ ನಂಜಿನಿಂದ ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಈ ವೇಳೆ ನಂಜನಗೂಡು ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶೀಲ್ದಾರ್ ಮಹೇಶ್ ಕುಮಾರ್, ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ನಗರಸಭ ಆಯುಕ್ತ ಕರಿಬಸವಯ್ಯ ಸೇರಿದಂತೆ ಹಲವರು ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







