ಛತ್ತೀಸ್ ಗಢ: ಹೈಕೋರ್ಟ್ ಗೆ ಸಲ್ಲಿಸಿದ 159 ಮಂದಿ ತಬ್ಲೀಗಿಗಳ ಪಟ್ಟಿಯಲ್ಲಿ 108 ಹಿಂದೂಗಳು !
"ನಾನು ಬ್ರಾಹ್ಮಣ, ನನಗೂ ತಬ್ಲೀಗ್ ಜಮಾತ್ ಗೂ ಎಲ್ಲಿಂದೆಲ್ಲಿಯ ಸಂಬಂಧ?"

ಛತ್ತೀಸ್ ಗಢ: ದಿಲ್ಲಿಯ ತಬ್ಲೀಗಿ ಜಮಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದವರು ಎಂದು ಕ್ವಾರಂಟೈನ್ ನಲ್ಲಿ ಇರಿಸಲಾದ 159 ಜನರಲ್ಲಿ 108 ಮಂದಿ ಹಿಂದೂಗಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ಗೆ ಭೇಟಿ ನೀಡಿ ಮರಳಿರುವ ರಾಜ್ಯದ 52 ಮಂದಿಯನ್ನು ಹುಡುಕಲು ವಿಶೇಷ ಪತ್ತೆ ಕಾರ್ಯಾಚರಣೆ ನಡೆಸಬೇಕು ಎಂದು ಛತ್ತೀಸ್ ಗಢ ಹೈಕೋರ್ಟ್ ಗುರುವಾರ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಕಾರಣ ನ್ಯಾಯವಾದಿ ಗೌತಮ್ ಕ್ಷೇತ್ರಪಾಲ್ ಎಂಬವರು ಸಲ್ಲಿಸಿದ ಅರ್ಜಿ.
ಆ ಅರ್ಜಿಯಲ್ಲಿ ಗೌತಮ್ ಅವರು 159 ಮಂದಿಯ ಪಟ್ಟಿ ನೀಡಿ ಆ ಪೈಕಿ 107 ಮಂದಿ ಮಾತ್ರ ಪರೀಕ್ಷೆಗೆ ಒಳಗಾಗಿದ್ದಾರೆ. ಉಳಿದ 52 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಪತ್ತೆಹಚ್ಚದಿದ್ದರೆ ಅವರಿಂದಾಗಿ ರಾಜ್ಯದಲ್ಲಿ ಕೊರೋನ ಸೋಂಕು ಹರಡುವ ಅಪಾಯವಿದೆ ಎಂದು ಹೇಳಿದ್ದರು. ಈ ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರ ಹಾಗು ನ್ಯಾ. ಗೌತಮ್ ಬಾಧುರಿ ರಾಜ್ಯ ಸರಕಾರಕ್ಕೆ ಈ ಆದೇಶ ನೀಡಿದರು.
ಹೈಕೋರ್ಟ್ ನಿಂದ ಈ ಆದೇಶ ಬರುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಛತ್ತೀಸ್ ಗಢದ ಕಾಂಗ್ರೆಸ್ ಸರಕಾರದ ವಿರುದ್ಧ ಬಲಪಂಥೀಯರಿಂದ ಟೀಕಾ ಪ್ರಹಾರದ ಅಭಿಯಾನವೇ ನಡೆಯಿತು. ಈ ಪೈಕಿ ನಾಪತ್ತೆಯಾಗಿರುವ ತಬ್ಲೀಗಿಗಳು ಎನ್ನಲಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹೆಸರಲ್ಲಿ ಕೋಮು ದ್ವೇಷದ, ಹಿಂಸೆ ಪ್ರಚೋದಿಸುವ ಧಾರಾಳ ಸಂದೇಶಗಳು ವ್ಯಾಪಕವಾಗಿ ಹರಿದಾಡಿದವು. ಸಾಮಾಜಿಕ ಜಾಲತಾಣದಲ್ಲಿ 'ತಲೆಮರೆಸಿಕೊಂಡ ತಬ್ಲೀಗಿಗಳು' ಎನ್ನುವ ವದಂತಿ ಹರಡಿದ್ದು, ತಬ್ಲೀಗಿಗಳ ವಿರುದ್ಧ ಹಿಂಸಾಚಾರ ನಡೆಸುವಂತಹ ಪ್ರಚೋದನಾತ್ಮಕ ಕರೆ ನೀಡಲಾಗಿತ್ತು.
ಆದರೆ ಅರ್ಜಿದಾರ ಗೌತಮ್ BBCಗೆ ಒದಗಿಸಿದ ತನ್ನ ಪಟ್ಟಿಯಲ್ಲಿ ದೊಡ್ಡ ಅಚ್ಚರಿ ಕಾದಿತ್ತು. ಆ ಪಟ್ಟಿಯಲ್ಲಿದ್ದ 159 ಮಂದಿಯ ಪೈಕಿ 108 ಮಂದಿ ಮುಸ್ಲಿಮೇತರರಾಗಿದ್ದರು. ಪಟ್ಟಿಯಲ್ಲಿ ಎಲ್ಲರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಕೂಡ ಇತ್ತು.
ನಾಪತ್ತೆಯಾದವರ ಪಟ್ಟಿಯಲ್ಲಿದ್ದ ಕೆಲವರ ಜೊತೆ BBC ಮಾತನಾಡಿದ್ದು, "ನಮಗೂ ತಬ್ಲೀಗಿ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೆಚ್ಚಿನವರು ಹೇಳಿದ್ದಾರೆ. "ನಾನು ಬ್ರಾಹ್ಮಣ. ನನಗೂ ತಬ್ಲೀಗಿ ಜಮಾತ್ ಗೂ ಎಲ್ಲಿಂದೆಲ್ಲಿಯ ಸಂಬಂಧ?. ನಾನು ಮಾರ್ಚ್ ನಲ್ಲಿ ದಿಲ್ಲಿಗೆ ಹೋಗಿದ್ದೆ. ಆದರೆ ತಬ್ಲೀಗಿ ಕಾರ್ಯಕ್ರಮಕ್ಕಲ್ಲ. ನಿಝಾಮುದ್ದೀನ್ ರೈಲ್ವೆ ನಿಲ್ದಾಣದಿಂದ ರೈಲು ಹತ್ತಿ ಬಿಲಾಸ್ಪುರಕ್ಕೆ ಮರಳಿದ್ದೆ ಎನ್ನುವುದು ಸತ್ಯ" ಎಂದು ಇದೇ ಪಟ್ಟಿಯಲ್ಲಿರುವ ಶ್ರೀಕುಮಾರ್ ಪಾಂಡೆ (ಹೆಸರು ಬದಲಿಸಲಾಗಿದೆ) ಎಂಬವರು ಹೇಳಿದ್ದಾರೆ.
"ನಿಝಾಮುದ್ದೀನ್ ಬಳಿ ಮೊಬೈಲ್ ಲೊಕೇಶನ್ ಗಳನ್ನು ಟ್ರೇಸ್ ಮಾಡಿ ಈ ಪಟ್ಟಿ ತಯಾರಿಸಲಾಗಿತ್ತು" ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ Theprint.in ವರದಿ ಮಾಡಿದೆ.
ಕೋರ್ಟ್ ಆದೇಶದ ನಂತರ ಪ್ರತಿಕ್ರಿಯಿಸಿದ್ದ ಛತ್ತೀಸ್ ಗಢ ಸರಕಾರ ಎಲ್ಲರನ್ನೂ ಗುರುತಿಸಲಾಗಿದೆ ಎಂದಿತ್ತು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಸಿಎಂ ಭೂಪೇಶ್ ಬಾಘೇಲ್, "ನಿಝಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಾವ ತಬ್ಲೀಗಿಯೂ ನಾಪತ್ತೆಯಾಗಿಲ್ಲ. ಎಲ್ಲರನ್ನೂ ಗುರುತಿಸಲಾಗಿದ್ದು, ಕ್ವಾರಂಟೈನ್ ನಲ್ಲಿರಿಸಲಾಗಿದೆ" ಎಂದಿದ್ದರು.
ಪಟ್ಟಿಯಲ್ಲಿ ಹಿಂದೂಗಳಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, "ನಿಝಾಮುದ್ದೀನ್ ಏರಿಯಾದಲ್ಲಿ ಟ್ರೇಸ್ ಆದ ಮೊಬೈಲ್ ಗಳ ಆಧಾರದಲ್ಲಿ ಆಂಧ್ರ ಪ್ರದೇಶ ಎಸ್ ಐಬಿ 159 ಮಂದಿಯ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ವಿವಿಧ ಸಮುದಾಯಗಳ ಜನರಿದ್ದಾರೆ" ಎಂದು ಹೇಳಿದ್ದರು.







