ಬೆಂಗಳೂರಿನಲ್ಲಿ ರಸ್ತೆಗಿಳಿದ ಸಂಜೀವಿನಿ ಸ್ಯಾನಿಟೈಸರ್ ಬಸ್

ಬೆಂಗಳೂರು, ಎ.11: ನಗರದಲ್ಲಿ ಶುಕ್ರವಾರ ಸಂಜೀವಿನಿ ಹೆಸರಿನ ಸ್ಯಾನಿಟೈಸರ್ ಬಸ್ ರಸ್ತೆಗಿಳಿದಿದ್ದು, ಶಾಂತಿನಗರ ಬಸ್ ನಿಲ್ದಾಣದಲ್ಲಿ ಮೊಬೈಲ್ ಸ್ಯಾನಿಟೈಸರ್ ಬಸ್‍ಗೆ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಚಾಲನೆ ನೀಡಿದರು.
ಬಳಿಕ ಬಸ್ ಏರಿದ ಕಳಸದ್ ಅವರು ಸ್ವತಃ ಬಸ್‍ನ ಸ್ಯಾನಿಟೈಸರ್ ಸಿಂಪಡನೆಗೆ ಒಳಗಾದರು. ಕೊರೋನ ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರ ಅನುಕೂಲಕ್ಕೆ ಈ ಬಸ್ ತಯಾರಿಸಲಾಗಿದ್ದು ಇಂದಿನಿಂದ ಬಸ್ ಸಂಚರಿಸಲಿದೆ ಎಂದು ಅವರು ತಿಳಿಸಿದರು.
ಹತ್ತು ವರ್ಷ ಹಳೆಯದಾದ ಅನುಪಯುಕ್ತ ಬಸ್‍ನ್ನು ಸ್ಯಾನಿಟೈಸರ್ ಬಸ್ ಆಗಿ ಕೆಎಸ್‍ಆರ್‍ಟಿಸಿ ಪರಿವರ್ತಿಸಿದೆ. ಬೇರೆ ಬೇರೆ ಜಿಲ್ಲೆಗಳ ಡಿಪೋಗಳಲ್ಲಿ ಇರುವ ಹಳೆಯ ಬಸ್‍ಗಳನ್ನ ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಲಾಗುತ್ತದೆ. ಬಸ್ ಮುಂಭಾಗ ಹತ್ತಿ ಹಿಂಬಾಗಿಲ ಮೂಲಕ ಇಳಿದರೆ ಸಂಪೂರ್ಣವಾಗಿ ದೇಹಕ್ಕೆ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಆಗಲಿದೆ. ಈ ಮೂಲಕ ಕೊರೋನ ಸೊಂಕು ತಗುಲುವುದು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಓಡಾಟ ಇಲ್ಲದಿರುವುದರಿಂದ ನಗರದಲ್ಲಿ ಅವಶ್ಯಕ ಸೇವೆ ಸಲ್ಲಿಸುತ್ತಿರುವ ಪೊಲೀಸ್, ಮೆಡಿಕಲ್ ಹಾಗೂ ಪೌರ ಕಾರ್ಮಿಕರ ಅನುಕೂಲಕ್ಕಾಗಿ ಈ ಬಸ್ ಸಂಚರಿಸಲಿದೆ ಎಂದರು.





