ಜೀವನ ಮತ್ತು ಅರ್ಥವ್ಯವಸ್ಥೆ ಎರಡರ ರಕ್ಷಣೆಯೂ ಅಗತ್ಯ: ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಸಂವಾದದಲ್ಲಿ ಪ್ರಧಾನಿ ಮೋದಿ

ಹೊಸದಿಲ್ಲಿ, ಎ.11: ಈ ಹಿಂದೆ ರಾಷ್ಟ್ರದ ಜನತೆಗೆ ನೀಡಿದ ಸಂದೇಶದಲ್ಲಿ ನಾನು ಜೀವನವಿದ್ದರೇ ಪ್ರಪಂಚ ಅಸ್ತಿತ್ವದಲ್ಲಿರುತ್ತದೆ ಎಂದಿದ್ದೆ. ಈಗ ನಾವು ಜೀವನ ಮತ್ತು ಪ್ರಪಂಚ (ಅರ್ಥವ್ಯವಸ್ಥೆ) ಎರಡರ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಅನ್ನು ವಿಸ್ತರಿಸುವ ಬಗ್ಗೆ ನಿರ್ಧರಿಸಲು 13 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದದ ಬಳಿಕ ಮಾತನಾಡಿದ ಮೋದಿ, ಈಗ ಜೀವನ ಮತ್ತು ಪ್ರಪಂಚ ಎರಡನ್ನೂ ಗಮನದಲ್ಲಿರಿಸಿಕೊಂಡು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
ಎಪ್ರಿಲ್ 14ರಂದು ಕೊನೆಗೊಳ್ಳಬೇಕಿದ್ದ ಲಾಕ್‌ಡೌನ್ ಅನ್ನು ವಿಸ್ತರಿಸಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿಗಳ ಅಭಿಪ್ರಾಯ, ಕೊರೋನ ಸೋಂಕಿನ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಅವರ ಸಲಹೆಗಳನ್ನು ಪಡೆಯಲು ನಡೆಸಿದ ಈ ವೀಡಿಯೊ ಕಾನ್ಫರೆನ್ಸ್‌ನಲ್ಲಿ , ಕೆಲವು ಬದಲಾವಣೆಗಳೊಂದಿಗೆ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಬಹುತೇಕ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃಷ್ಯುತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಸಂಬಂಧಿಸಿ ಕೈಗೊಳ್ಳಬೇಕಾದ ನಿರ್ದಿಷ್ಟ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಶಿಫಾರಸು ಮಾಡಿದ್ದಾರೆ. ಇದರಿಂದ ಹಣ್ಣು ಮತ್ತು ತರಕಾರಿಗಳು ಕ್ಷಿಪ್ರವಾಗಿ ಗ್ರಾಹಕರಿಗೆ ಲಭಿಸುತ್ತದೆ ಮತ್ತು ಅವರು ಮನೆಯೊಳಗಿದ್ದೇ ಇವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಸೂಚಿಸಿದ್ದಾರೆ. ಅಲ್ಲದೆ ನಿರ್ಮಾಣ ಉದ್ದಿಮೆಯನ್ನು ಹಂತಹಂತವಾಗಿ ಪುನರಾರಂಭಿಸುವ ಬಗ್ಗೆ ಕೇಂದ್ರ ಸರಕಾರ ನಿರ್ದೇಶನ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.