ವಿಶ್ವಾದ್ಯಂತ ಜೀವಗಳನ್ನು ರಕ್ಷಿಸಿದ CIPLA ಔಷಧ ತಯಾರಿಕಾ ಸಂಸ್ಥೆ ಸ್ಥಾಪಕ, ಭಾರತೀಯ ಅಬ್ದುಲ್ ಹಮೀದ್
ಕೊರೋನ ಚಿಕಿತ್ಸೆಗೆ ಬಳಸಲಾಗುವ ಮಲೇರಿಯಾ ಔಷಧಿ ತಯಾರಾದದ್ದು ಇವರ ಕಂಪೆನಿಯಲ್ಲೇ

1920ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಕಾನೂನು ಪದವಿ ಪಡೆದು ಬ್ಯಾರಿಸ್ಟರ್ ಮಾಡುವ ಮಹತ್ವಾಕಾಂಕ್ಷೆಯಿಂದ ಹಡಗಿನಲ್ಲಿ ಬ್ರಿಟನ್ ಗೆ ಕಳುಹಿಸಿದರು. ಅಂದಿನ ಕಾಲದ ಶ್ರೀಮಂತ ಕುಟುಂಬಗಳ ಫ್ಯಾಷನ್ ಎನಿಸಿದ್ದ ವೃತ್ತಿ ಅದು. ಆದರೆ ಆ ಯುವಕ ವಕೀಲನಾಗಲು ಬಯಸಲಿಲ್ಲ; ಆತನ ಹೃದಯ ರಸಾಯನಶಾಸ್ತ್ರಕ್ಕಾಗಿ ತುಡಿಯುತ್ತಿತ್ತು.
ಆದರೆ ತಂದೆ ಆ ಯುವಕನಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿಲ್ಲ. ಹಡಗಿನಲ್ಲಿ ಕುಟುಂಬದಿಂದ ಬೀಳ್ಕೊಂಡು ಹೊರಟಾಗಲೇ ಖ್ವಾಜಾ ಅಬ್ದುಲ್ ಹಮೀದ್ ಅವರ ಮನಸ್ಸಿನಲ್ಲಿ ಭಿನ್ನ ಯೋಚನಾ ಲಹರಿ ಹರಿದಾಡುತ್ತಿತ್ತು. ಸಮುದ್ರ ಮಧ್ಯದಲ್ಲಿ ಹಡಗಿನಿಂದ ಸಮುದ್ರಕ್ಕೆ ಹಾರಿ ಜರ್ಮನಿಯ ನೆಲದಲ್ಲಿ ಕಾಲಿಟ್ಟರು. ಕಳೆದ ಶತಮಾನದ ಮೊದಲ ದಶಕಗಳಲ್ಲಿ ಜರ್ಮನಿ ರಸಾಯನಶಾಸ್ತ್ರ ಮತ್ತು ರಾಸಾಯನಿಕಗಳ ಅಧ್ಯಯನದಲ್ಲಿ ಮುಂಚೂಣಿಯಲ್ಲಿತ್ತು. ಅಲ್ಲಿ ಪದವಿ ಪಡೆದು, ಕಮ್ಯುನಿಸ್ಟ್ ವಿಚಾರಧಾರೆಯ ಜರ್ಮನ್ ಯಹೂದಿ ಮಹಿಳೆಯನ್ನು ಅಬ್ದುಲ್ ಹಮೀದ್ ವಿವಾಹವಾದರು. ನಾಝಿಗಳು ಅತಿಯಾಗಿ ದ್ವೇಷಿಸುತ್ತಿದ್ದ ಸಮುದಾಯ ಅದು. ಇಬ್ಬರೂ ಅಡಾಲ್ಫ್ ಹಿಟ್ಲರ್ ನ ಹಿಂಬಾಲಕರ ಕೈಗೆ ಸಿಗುವ ಮುನ್ನ ಜರ್ಮನಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಭಾರತ ತಲುಪಿದರು.
ರಸಾಯನ ಕ್ಷೇತ್ರದಲ್ಲಿ ವಿಸ್ತೃತವಾದ ಜ್ಞಾನ ಹೊಂದಿದ್ದ ಖ್ವಾಜಾ ಹಮೀದ್ ಕೆಮಿಕಲ್, ಇಂಡಸ್ಟ್ರಿಯಲ್ ಮತ್ತು ಫಾರ್ಮಸ್ಯೂಟಿಕಲ್ ಲ್ಯಾಬೋರೇಟರಿಯನ್ನು 1935ರಲ್ಲಿ ಆರಂಭಿಸಿದರು. ಸ್ವಾತಂತ್ರ್ಯಾನಂತರ ಇದನ್ನು 'ಸಿಪ್ಲಾ' (CIPLA) ಎಂದು ಸಂಕ್ಷಿಪ್ತರೂಪದಿಂದ ಹೆಸರಿಸಲಾಯಿತು.

ಖ್ವಾಜಾ ಹಮೀದ್ ಅವರು ಮಹಾತ್ಮ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಟ್ಟಾ ಅಭಿಮಾನಿ. ನೈಜ ರಾಷ್ಟ್ರೀಯತೆಯ ಸ್ಫೂರ್ತಿಯಿಂದ ಜನಸಾಮಾನ್ಯರಿಗಾಗಿ ಅಗ್ಗದ ಬೆಲೆಯ ಜೆನರಿಕ್ ಔಷಧಿಗಳನ್ನು ಉತ್ಪಾದಿಸಲು ಆರಂಭಿಸಿದರು. ಇದರಲ್ಲಿ ಮಲೇರಿಯಾ ಮತ್ತು ಕ್ಷಯರೋಗದ ಔಷಧಿಗಳು ಮಾತ್ರವಲ್ಲದೇ ಇತರ ಉಸಿರಾಟದ ತೊಂದರೆಗಳು, ಹೃದ್ರೋಗ ಮತ್ತು ಮಧುಮೇಹ, ಆರ್ಥರೈಟಿಸ್ ನಂತಹ ರೋಗಗಳ ಔಷಧಿಗಳೂ ಸೇರಿವೆ.
1970ರ ದಶಕದಲ್ಲಿ ಸಿಪ್ಲಾ, ಪ್ರೊಪ್ರನೊಲೋಲ್ ಎಂಬ ಔಷಧಿ ಉತ್ಪಾದನೆ ಆರಂಭಿಸಿತು. ಅಮೆರಿಕದ ಫಾರ್ಮಸ್ಯೂಟಿಕಲ್ ಕಂಪನಿ ಬ್ರೂಕ್ಲಿನ್, ನ್ಯೂಯಾರ್ಕ್ ನಲ್ಲಿ ಇದಕ್ಕೆ ಪೇಟೆಂಟ್ ಪಡೆದಿತ್ತು. ರಕ್ತದೊತ್ತಡ, ಮೈಗ್ರೇನ್ ಮತ್ತು ಹೃದಯ ಕಾಯಿಲೆಗಳ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಅಂದಿನ ಎರಡು ಧ್ರುವಗಳ ವಿಶ್ವದಲ್ಲಿ ಅಮೆರಿಕ ಭಾರತದ ಸ್ನೇಹರಾಷ್ಟ್ರವಾಗಿರಲಿಲ್ಲ ಹಾಗೂ ನಿಜ ಅರ್ಥದ ಸೂಪರ್ ಪವರ್ ಆಗಿತ್ತು. ಡೊನಾಲ್ಡ್ ಟ್ರಂಪ್ ಅವರಂತೆ ಯಾವುದೇ ಎಚ್ಚರಿಕೆಯನ್ನು ನೀಡದೇ, ತನ್ನ ಸರ್ವಾಧಿಕಾರಕ್ಕೆ ಇಡೀ ವಿಶ್ವ ಬದ್ಧವಾಗಬೇಕು ಎಂಬ ಧೋರಣೆ ಹೊಂದಿತ್ತು.
ಅಮೆರಿಕ ಭಾರತ ಸರ್ಕಾರಕ್ಕೆ ದೂರು ನೀಡಿತು. ಆದರೆ ಕಳೆದ ವಾರ ನರೇಂದ್ರ ಮೋದಿ ಅಮೆರಿಕದ ಎಚ್ಚರಿಕೆಗೆ ತಲೆಬಾಗಿದಂತೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಪ್ರಧಾನಿ ನೇರವಾಗಿ ಖ್ವಾಜಾ ಅವರ ಮಗ ಯೂಸುಫ್ ಹಮೀದ್ ಅವರಿಗೆ ಬುಲಾವ್ ನೀಡಿದರು. ಕೇಂಬ್ರಿಜ್ ನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದ ಯೂಸುಫ್ ಆಗಷ್ಟೇ ಕಂಪನಿಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಪೇಟೆಂಟ್ ಕಾನೂನನ್ನು ಉಲ್ಲಂಘಿಸಿ ಭಾರತವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಿದ್ದೀರಿ ಎಂದು ಇಂದಿರಾ ಗಾಂಧಿ ನೇರವಾಗಿ ಕೇಳಿದರು. ಆ ಸಂದರ್ಭದಲ್ಲಿ ಯೂಸುಫ್ ತಮ್ಮ ತಂದೆ ಏಕೆ ಈ ಕಂಪನಿಯನ್ನು ಹುಟ್ಟುಹಾಕಿದರು ಎಂಬ ಕಥೆಯನ್ನು ವಿವರಿಸಿ, ಕಡಿಮೆ ಬೆಲೆಯ, ಗುಣಮಟ್ಟದ ಔಷಧಿಯನ್ನು ಬಡವರಿಗೆ ಪೂರೈಸುವುದು ಧ್ಯೇಯ ಎಂದು ಮನವರಿಕೆ ಮಾಡಿಕೊಟ್ಟರು.
ತಮ್ಮ ಕಂಪನಿಯನ್ನು ಮಗನಿಗೆ ಹಸ್ತಾಂತರಿಸಿದಾಗ ಖ್ವಾಜಾ ಒಂದು ವಿಷಯ ಸ್ಪಷ್ಟಪಡಿಸಿದ್ದರು: “ನಮ್ಮದು ವಿಶ್ವಾದ್ಯಂತ ಇರುವ ಇತರ ಫಾರ್ಮಸ್ಯೂಟಿಕಲ್ ಕಂಪನಿಗಳಂತೆ ಅಲ್ಲ. ಲಾಭ ನಮ್ಮ ಉದ್ದೇಶ ಅಲ್ಲ. ಬಡವರಿಗೆ ಆರೋಗ್ಯ ಲಭಿಸಬೇಕು ಹಾಗೂ ಅವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಇದಲ್ಲದಿದ್ದರೆ ಗುಣಮಟ್ಟದ ಔಷಧಿ ಸಿಗದೇ ಸಾಯುತ್ತಾರೆ”
ಈ ವಿಷಯವನ್ನು ಯೂಸೂಫ್ ಇಂದಿರಾಗಾಂಧಿಯವರಿಗೆ ಮನದಟ್ಟು ಮಾಡಿದರು. ಮುಂದಿನ ಪರಿಣಾಮದ ಅರಿವಿದ್ದರೂ, ಭಾರತದಲ್ಲಿ ಈ ಔಷಧಿ ಉತ್ಪಾದನೆ ಸ್ಥಗಿತಗೊಳಿಸಬೇಕು ಎಂಬ ಅಮೆರಿಕದ ಆದೇಶವನ್ನು ಇಂದಿರಾ ಧಿಕ್ಕರಿಸಿದರು. ಈ ಕಾರಣಕ್ಕಾಗಿಯೇ ಅಮೆರಿಕನ್ನರು ಅವರನ್ನುದ್ವೇಷಿಸುತ್ತಿದ್ದರು.

ಯೂಸುಫ್ ಅವರ ಸಲಹೆಯಂತೆ ಔಷಧಿಗಳಿಗೆ ಸಂಬಂಧಿಸಿದ ಪೇಟೆಂಟ್ ಕಾನೂನು ಬದಲಿಸುವಲ್ಲಿ ಇಂದಿರಾ ಪ್ರಮುಖ ಪಾತ್ರ ವಹಿಸಿದರು. ಔಷಧಿ ಪೇಟೆಂಟ್ ನಲ್ಲಿ ಔಷಧಿಯನ್ನು ಪರಿಗಣಿಸದೇ ಉತ್ಪಾದನಾ ಪ್ರಕ್ರಿಯೆಯನ್ನಷ್ಟೇ ಉಲ್ಲಂಘಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಿಸಿದರು. ಇದರಿಂದಾಗಿ ಸಿಪ್ಲಾ ತನ್ನ ಕಡಿಮೆ ಬೆಲೆಯ ಜೆನರಿಕ್ ಔಷಧಿಗಳನ್ನು ಸಾಧ್ಯವಾದಷ್ಟೂ ಬಡವರಿಗಾಗಿ ಉತ್ಪಾದಿಸುವುದನ್ನು ಮುಂದುವರಿಸಲು ಸಾಧ್ಯವಾಯಿತು. ಆ ಬಳಿಕ ಸಿಪ್ಲಾ, ಎಚ್‍ಐವಿಗೆ ಚಿಕಿತ್ಸೆ ನೀಡುವ ಕಡಿಮೆ ಬೆಲೆಯ ಔಷಧಿಯನ್ನೂ ಉತ್ಪಾದಿಸುತ್ತಿದೆ ಹಾಗೂ ತನ್ನ ಕಾರ್ಯಾಚರಣೆಯನ್ನು ಅತಿ ಹೆಚ್ಚು ಬಡ ಹಾಗೂ ಎಚ್‍ಐವಿ ರೋಗಿಗಳಿದ್ದ ಆಫ್ರಿಕನ್ ದೇಶಗಳು ಸೇರಿದಂತೆ ಹಲವು ಅಭಿವೃದ್ಧಿಶೀಲ ದೇಶಗಳಿಗೆ ವಿಸ್ತರಿಸಿತು.
ಅಂದಿನಿಂದ ಈ ಕಂಪೆನಿ, ಮಲೇರಿಯಾ, ಲುಂಪಸ್, ರುಮಿಟಾಯ್ಡ್ ಆರ್ಥರೈಟಿಸ್ ಚಿಕಿತ್ಸೆಯಲ್ಲಿ ಬಳಸುವ ಹೈಡ್ರೋಕ್ಲೋರೋಕ್ವಿನ್ ಔಷಧಿಯನ್ನು ಉತ್ಪಾದಿಸುತ್ತಾ ಬಂದಿದೆ. ಇದೀಗ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಇದನ್ನು ದೊಡ್ಡ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದ್ದು, ಬಡ ಭಾರತೀಯರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಈ ಔಷಧವನ್ನು ರಫ್ತು ಮಾಡುವಂತೆ ಭಾರತಕ್ಕೆ ಟ್ರಂಪ್ ತಾಕೀತು ಮಾಡುವ ಮುನ್ನ, ಮುಂಬೈನ ಸೈಫೀ ಆಸ್ಪತ್ರೆಯ ಸೋಂಕು ರೋಗಗಳ ತಜ್ಞ ಡಾ.ಹಮೀದುದ್ದೀನ್ ಪರದವಾಲಾ ನಮಗೆ ಒಂದು ಅಂಶವನ್ನು ಗಮನಿಸುವಂತೆ ಸೂಚಿಸಿ, ಮಲೇರಿಯಾ ಇಲ್ಲದ ದೇಶಗಳಿಗೆ ಹೋಲಿಸಿದರೆ ಮಲೇರಿಯಾ ಮತ್ತು ಕ್ಷಯರೋಗ ಸಾಮಾನ್ಯವಾಗಿರುವ ದೇಶಗಳಲ್ಲಿ ಕೊರೋನ ಪಿಡುಗು ಕಡಿಮೆ ಇದೆ ಎಂದು ಪ್ರತಿಪಾದಿಸಿದ್ದರು.
ಅಂದರೆ ಮಲೇರಿಯಾ ಯಾವೆಲ್ಲ ದೇಶಗಳಲ್ಲಿ ಇಲ್ಲ?, ಅಮೆರಿಕ, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್, ಜರ್ಮನಿ, ಸ್ಪೇನ್, ಕೆನಡಾ ಇತ್ಯಾದಿ. ಅಂದರೆ ಈ ದೇಶಗಳು ಗರಿಷ್ಠ ಸೋಂಕಿನ ಸಮಸ್ಯೆಯನ್ನು ಎದುರಿಸಿವೆ. ನಾನು ಜರ್ಮನಿ ಬಗ್ಗೆ ಯೋಚಿಸಿದಾಗ, ಕ್ಲೋರೋಕ್ವಿನ್ ಔಷಧಿಯನ್ನು ಪೂರೈಸುತ್ತಿರುವ ಬಗ್ಗೆ ಭಾರತಕ್ಕೆ ಏಕೆ ಕೃತಜ್ಞತೆ ಹೇಳುತ್ತಿದೆ ಎನಿಸಿತ್ತು. ಅಂದು ಖ್ವಾಜಾ ಹಮೀದ್ ಹಾಗೂ ಅವರ ಪತ್ನಿಯನ್ನು ಹಿಟ್ಲರ್ ಬೆಂಬಲಿಗರು ಹಿಡಿದು ಶಿಬಿರಗಳಿಗೆ ಕಳುಹಿಸಿದ್ದರೆ ಏನಾಗುತ್ತಿತ್ತು ಎಂಬ ಕಲ್ಪನೆ ಬಂತು.
ಇದು ಮುಸ್ಲಿಮರನ್ನು ಭೂತದಂತೆ ಕಾಣುವ, ರೋಗವನ್ನು ಸಮುದಾಯದ ಜತೆ ಗುರಿಸುವ ಈ ದೇಶದ ಧರ್ಮಾಂಧರಿಗೂ ಅನ್ವಯಿಸುತ್ತದೆ. ಈ ವಿಶ್ವದಲ್ಲಿ ಕರ್ಮ ಎನ್ನುವುದಿದೆ. ನೀವಲ್ಲದಿದ್ದರೆ ನಿಮ್ಮ ಭವಿಷ್ಯದ ಪೀಳಿಗೆಯಾದರೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಇವರಲ್ಲಿ ಹಲವು ಮಂದಿ ಬಹುಶಃ ಮಲೇರಿಯಾದಿಂದ ಬಳಲಿರುವ ಸಾಧ್ಯತೆ ಇದೆ. ಅದಕ್ಕೆ ಕ್ಲೋರೋಕ್ವಿನ್ ಔಷಧಿ ಸೇವಿಸಿದ್ದರಿಂದ, ಕೋವಿಡ್-19ಗೆ ಪ್ರತಿರೋಧ ತೋರುವ ಆ್ಯಂಟಿಬಾಡಿಗಳ ಅಭಿವೃದ್ಧಿಗೆ ಇದು ಕಾರಣವಾಗಿರಬಹುದು. ಇವರ ಪೈಕಿ ಹಲವು ಮಂದಿ ಈ ಔಷಧಿ ಸೇವಿಸಿರಬಹುದು. ತಮಗೆ ಅರಿವಿಲ್ಲದೆಯೇ ಮುಸ್ಲಿಮರ ಒಡೆತನದ ಕಂಪನಿಗಳು ಉತ್ಪಾದಿಸಿದ ಜೆನರಿಕ್ ಔಷಧಿ ತೆಗೆದುಕೊಂಡಿರಬಹುದು. ತಮ್ಮ ರಕ್ತದ ಒತ್ತಡ ಹಾಗೂ ಮಧುಮೇಹ ನಿಯಂತ್ರಣದಲ್ಲಿರುವುದಕ್ಕೆ ಅವರು ಹಮೀದ್ ಕಂಪನಿಗೆ ಋಣ ಹೊಂದಿದ್ದಾರೆ.
ಭಾರತೀಯ ಬಡವರಿಗೆ ಜೆನರಿಕ್ ಔಷಧಿಗಳನ್ನು ಪೂರೈಸಿ, ಆರೋಗ್ಯ ಸೇವೆಯನ್ನು ಬಡವರ ಕೈಗೆಟುಕುವಂತೆ ಮಾಡಿದ ಸಿಪ್ಲಾದಂತೆ ಭಾರತದ ಮಾತ್ರವಲ್ಲ; ವಿಶ್ವದ ಇತರ ಯಾವ ಕಂಪನಿಯೂ ಮಾಡಿರುವ ಸಾಧ್ಯತೆ ಇಲ್ಲ ಎಂದು ಖಚಿತವಾಗಿ ಹೇಳಬಹುದು. ತನ್ನ ಸಂಶೋಧನಾ ವಿಷಯದಲ್ಲೂ ಜಿಪುಣತನ ತೋರದೇ, ಔಷಧೀಯ ಅಂಶಗಳನ್ನು ಮತ್ತು ಪ್ರಕ್ರಿಯೆಯನ್ನು ದೇಶದ ಇತರ ಕಂಪನಿಗಳಿಗೆ ನೀಡಿ ಉತ್ಪಾದಿಸಲು ಕೂಡಾ ಅವಕಾಶ ಮಾಡಿಕೊಟ್ಟಿದೆ.
ದೇಶ ವಿಭಜನೆ ಸಂದರ್ಭದಲ್ಲಿ ಮುಂಬೈ ನಿವಾಸಿಯಾಗಿದ್ದ ಮುಹಮ್ಮದ್ ಅಲಿ ಜಿನ್ನಾ ಅವರು ಪಾಕಿಸ್ತಾನಕ್ಕೆ ತೆರಳುವ ಸಂದರ್ಭದಲ್ಲಿ, ಹಮೀದ್ ಅವರ ಸಾಮಾಜಿಕ ವಲಯದಲ್ಲೇ ಇದ್ದರು. ಖ್ವಾಜಾ ಅವರಿಗೆ ಜಿನ್ನಾ ಪಾಕಿಸ್ತಾನಕ್ಕೆ ಆಗಮಿಸುವಂತೆ ಕೇಳಿದ್ದರು. ಆದರೆ ಗಾಂಧೀಜಿಯವರ ಕಟ್ಟಾ ಅಭಿಮಾನಿಗಳಾಗಿದ್ದ ಅವರು, ಭಾರತದಲ್ಲೇ ಉಳಿಯಲು ನಿರ್ಧರಿಸಿದರು.
ಇದೇ ಮುಸ್ಲಿಂ ಸಮುದಾಯದಲ್ಲಿ ನಿಝಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ತಬ್ಲೀಗಿ ಜಮಾಅತ್ ಅನುಯಾಯಿಗಳೂ ಇದ್ದಾರೆ. ಅಂತೆಯೇ ಹಿಂದೂಗಳೂ ಇದ್ದಾರೆ; ತಮ್ಮಧರ್ಮಾಂಧತೆಯನ್ನು ಒಪ್ಪುವುದಿಲ್ಲ ಎಂದು ಸಹಧರ್ಮೀಯರನ್ನೇ ಹತ್ಯೆ ಮಾಡುವ ಹಿಂದೂಗಳೂ ಇದ್ದಾರೆ. ಇಂತಹ ಕೆಲವರ ಕೃತ್ಯಕ್ಕಾಗಿಇಡೀ ಹಿಂದೂ ಸಮುದಾಯವನ್ನು ಗುರಿ ಮಾಡುವುದು ಹೇಗೆ ಸರಿಯಲ್ಲವೋ ಹಾಗೇ ಕೆಲ ತಬ್ಲೀಗಿ ಜಮಾಅತ್ ಅನುಯಾಯಿಗಳು ಮಾತ್ರ ಮುಸ್ಲಿಂ ಸಮುದಾಯವಲ್ಲ. ಕೆಲವರ ಕೃತ್ಯಕ್ಕಾಗಿ ಇಡೀ ಸಮುದಾಯವನ್ನೇ ದೂಷಿಸುವುದನ್ನು ನಿಲ್ಲಿಸಲೇಬೇಕು.







