ಪರಿಹಾರ ಪ್ಯಾಕೇಜ್ ನೀಡದಿದ್ದರೆ 1.5 ಕೋಟಿ ಉದ್ಯೋಗ ನಷ್ಟ: ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ಎಚ್ಚರಿಕೆ
ಕೊರೋನ ಲಾಕ್ ಡೌನ್

ಹೊಸದಿಲ್ಲಿ, ಎ.12: ರಫ್ತು ಕ್ಷೇತ್ರಕ್ಕೆ ಪರಿಹಾರ ಪ್ಯಾಕೇಜ್ ನ್ನೊದಗಿಸಲು ಸರಕಾರವು ತ್ವರಿತ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ 1.5 ಕೋಟಿ ಉದ್ಯೋಗಗಳು ನಷ್ಟವಾಗಲಿವೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ)ವು ಎಚ್ಚರಿಕೆಯನ್ನು ನೀಡಿದೆ.
2020ನೇ ಸಾಲಿನಲ್ಲಿ ಜಾಗತಿಕ ವ್ಯಾಪಾರದ ಬಗ್ಗೆ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ)ಯ ನಿರಾಶಾದಾಯಕ ಮುನ್ನೋಟ ಮತ್ತು ಕೊರೋನ ವೈರಸ್‌ನಿಂದಾಗಿ ಭಾರತದ ಆರ್ಥಿಕತೆಯು ಇನ್ನಷ್ಟು ಬಡತನದ ಕೂಪಕ್ಕೆ ತಳ್ಳಲ್ಪಡುವ ಅಪಾಯವಿದೆ ಎಂಬ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ)ಯ ಎಚ್ಚರಿಕೆಯನ್ನು ಎಫ್‌ಐಇಒ ಅಧ್ಯಕ್ಷ ಶರದ ಕುಮಾರ ಸರಾಫ್ ಉಲ್ಲೇಖಿಸಿದರು. ಬದುಕು ಮತ್ತು ಜೀವನೋಪಾಯ ಇವುಗಳ ಪೈಕಿ ಯಾವುದೇ ಒಂದಕ್ಕೆ ಹೆಚ್ಚು ಆದ್ಯತೆ ನೀಡಿದರೂ ಅದು ದೇಶಕ್ಕೆ ವಿನಾಶಕಾರಿಯಾಗುವುದರಿಂದ ಇವೆರಡರ ನಡುವೆ ಸಮತೋಲನವನ್ನು ಸಾಧಿಸುವ ಅಗತ್ಯವಿದೆ ಎಂದು ಹೇಳಿದರು.
ಲಾಕ್ ಡೌನ್ ಅವಧಿಯಲ್ಲಿಯೂ ಸಾಕಷ್ಟು ಸುರಕ್ಷಾ ನಿಯಮಗಳ ಪಾಲನೆಗೊಳಪಟ್ಟು ಕನಿಷ್ಠ ಸಿಬ್ಬಂದಿಗಳೊಡನೆ ತಯಾರಿಕೆಯನ್ನು ಆರಂಭಿಸಲು ರಫ್ತುದಾರರಿಗೆ ಅವಕಾಶ ನೀಡಬೇಕು ಎಂದು ಹೇಳಿದ ಅವರು, ವೇತನ, ಬಾಡಿಗೆ ಇತ್ಯಾದಿ ವೆಚ್ಚಗಳನ್ನು ಭರಿಸಲು ಸರಕಾರವು ಬಡ್ಡಿರಹಿತ ದುಡಿಯುವ ಬಂಡವಾಳ ಸಾಲಗಳನ್ನು ನೀಡಬೇಕು ಮತ್ತು ಮಾರ್ಚ್‌ನಿಂದ ಆರಂಭಿಸಿ ಕನಿಷ್ಠ ಮೂರು ತಿಂಗಳುಗಳ ಅವಧಿಗೆ ಇಪಿಎಫ್ ಮತ್ತು ಇಎಸ್‌ಐಸಿ ಪಾವತಿಗಳಿಂದ ಅವುಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ರಫ್ತುದಾರರ ಬಳಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬೇಡಿಕೆಗಳಿವೆ ಮತ್ತು ಬೇಡಿಕೆಗಳನ್ನು ಸಕಾಲದಲ್ಲಿ ಪೂರೈಸಲು ಕನಿಷ್ಠ ಸಿಬ್ಬಂದಿಯೊಡನೆ ಫ್ಯಾಕ್ಟರಿಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು, ಇಲ್ಲದಿದ್ದರೆ ನಿಗದಿತವಾದ ಅನಿವಾರ್ಯ ವೆಚ್ಚಗಳ ಹೊರೆಯಡಿ ಸಿಲುಕಿರುವ ಅವುಗಳ ಪೈಕಿ ಹೆಚ್ಚಿನವು ದಿವಾಳಿಯ ಅಂಚಿಗೆ ತಳ್ಳಲ್ಪಡುತ್ತವೆ. ಅವುಗಳು ಪಡೆದಿರುವ ಭಾರೀ ಸಾಲಗಳ ಪಾವತಿ ಸಾಧ್ಯವಾಗದೆ ಬ್ಯಾಂಕುಗಳ ಕೆಟ್ಟ ಸಾಲಗಳೂ ಏರಿಕೆಯಾಗುತ್ತವೆ ಎಂದು ಸರಾಫ್ ಹೇಳಿದರು.
ರಫ್ತು ಘಟಕಗಳು ಆರಂಭದಲ್ಲಿ ಅರ್ಧದಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ವಾಣಿಜ್ಯ ಸಚಿವಾಲಯವು ಗೃಹ ಸಚಿವಾಲಯಕ್ಕೆ ಸೂಚಿಸಿದೆ ಎನ್ನಲಾಗಿದೆ. ಅಲ್ಲದೆ ಅದು ಇತ್ತೀಚಿಗೆ 2015-20ರ ಅವಧಿಗಾಗಿನ ವಿದೇಶ ವ್ಯಾಪಾರ ನೀತಿ (ಎಫ್‌ಟಿಪಿ)ಯ ಸಿಂಧುತ್ವವನ್ನು 2021,ಮಾರ್ಚ್‌ವರೆಗೆ ವಿಸ್ತರಿಸಿದೆ ಮತ್ತು ಇತರ ಕೆಲವು ನಿರ್ಬಂಧಗಳನ್ನು ಸಡಿಲಿಸಿದೆ. ಎಫ್‌ಟಿಪಿ ವಿಸ್ತರಣೆಯಿಂದ ರಫ್ತುದಾರರು ಹಾಲಿ ಯೋಜನೆಗಳಡಿ ಉತ್ತೇಜನಗಳನ್ನು ಪಡೆಯುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಆದರೆ ಸೇವೆಗಳ ರಫ್ತು ಉತ್ತೇಜನ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರಕಾರವಿನ್ನೂ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.







