ಸಿಎಎ ರದ್ದುಗೊಳಿಸಲು ಸಂಸತ್ತಿಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗುಂಪಿನ ಆಗ್ರಹ

ಹೊಸದಿಲ್ಲಿ, ಎ.12: ಭಾರತೀಯ ಸಂಸತ್ತು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಅನ್ನು ರದ್ದುಗೊಳಿಸಬೇಕು ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗುಂಪು ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲು) ತನ್ನ ಇತ್ತೀಚಿನ ವರದಿಯಲ್ಲಿ ಶಿಫಾರಸು ಮಾಡಿದೆ.
ಸಿಎಎ ತಾರತಮ್ಯದಿಂದ ಕೂಡಿದೆ ಮತ್ತು ಅದು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಮುಸ್ಲಿಮೇತರರಿಗೆ ಮಾತ್ರ ಅನ್ವಯಿಸುವುದರಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ವರದಿಯು ಹೇಳಿದೆ.
ಸಿಎಎ ಕಿರುಕುಳದಿಂದ ತಪ್ಪಿಸಿಕೊಳ್ಳಲು ಪರಾರಿಯಾಗುತ್ತಿರುವ ವಿದೇಶಗಳಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ಒದಗಿಸಲು ಬಯಸಿದೆ ಎಂದು ಹೇಳುವ ಮೂಲಕ ಸರಕಾರವು ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಶ್ರೀಲಂಕಾದಲ್ಲಿಯ ತಮಿಳು ಅಲ್ಪಸಂಖ್ಯಾತರು, ಭೂತಾನದ ಜನಾಂಗೀಯ ನೇಪಾಳಿಗಳಂತಹ ಭಾರತದಲ್ಲಿ ಆಶ್ರಯ ಕೋರಿರುವ ಇತರ ಹಲವಾರು ದುರ್ಬಲ ಗುಂಪುಗಳನ್ನು ಕಾಯ್ದೆಯಿಂದ ಹೊರಗಿರಿಸಿರುವುದರಿಂದ ಈ ಹೇಳಿಕೆಯು ಸುಳ್ಳಾಗಿದೆ. ಅಫಘಾನಿಸ್ತಾನದ ಹಝರಾಗಳು, ಪಾಕಿಸ್ತಾನದ ಶಿಯಾಗಳು ಮತ್ತು ಅಹಮದಿಯಾಗಳು ಹಾಗೂ ಮ್ಯಾನ್ಮಾರ್ ನ ರೊಹಿಂಗ್ಯಾಗಳಂತಹ ಕಿರುಕುಳಕ್ಕೊಳಗಾಗಿರುವ ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನೂ ಕಾಯ್ದೆಯಿಂದ ಹೊರಗಿರಿಸಲಾಗಿದೆ ಎಂದು ಎಚ್‌ಆರ್‌ಡಬ್ಲು ತನ್ನ 82 ಪುಟಗಳ ವರದಿಯಲ್ಲಿ ಹೇಳಿದೆ.
ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಸರಕಾರದ ಬೆಂಬಲಿಗರು ದಾಳಿಗಳನ್ನು ನಡೆಸಿದಾಗ ಮಧ್ಯ ಪ್ರವೇಶಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ಪದೇ ಪದೇ ವಿಫಲಗೊಂಡಿದ್ದರು ಎಂದು ಬೆಟ್ಟುಮಾಡಿರುವ ವರದಿಯು, ಆದರೆ ಪೊಲೀಸರು ಸಿಎಎ ಟೀಕಾರರನ್ನು ಬಂಧಿಸಲು ಮತ್ತು ಅತಿಯಾದ ಬಲಪ್ರಯೋಗದೊಡನೆ ಶಾಂತಿಯುತ ಪ್ರತಿಭಟನೆಗಳನ್ನು ಹಿಮ್ಮೆಟ್ಟಿಸಲು ಚುರುಕಾಗಿ ಕಾರ್ಯಾಚರಿಸಿದ್ದರು ಎಂದು ಹೇಳಿದೆ.
ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಬಗ್ಗೆ ಮಾತನಾಡಿದ ಎಚ್‌ಆರ್‌ಡಬ್ಲೂದ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನ ವೈರಸ್ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಮುಸ್ಲಿಂ ವಿರೋಧಿ ಹಿಂಸೆ ಮತ್ತು ತಾರತಮ್ಯದ ವಿರುದ್ಧ ಹೋರಾಡಲು ಏಕತೆಗೆ ಇನ್ನಷ್ಟೇ ಕರೆ ನೀಡಬೇಕಿದೆ. ಸರಕಾರದ ನೀತಿಗಳು ದೇಶಾದ್ಯಂತ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭೀತಿಯನ್ನು ಹುಟ್ಟಿಸಿರುವ ಗುಂಪು ಹಿಂಸಾಚಾರ ಮತ್ತು ಪೊಲೀಸ್ ನಿಷ್ಕ್ರಿಯತೆಗೆ ಅವಕಾಶಗಳನ್ನು ಕಲ್ಪಿಸಿವೆ ಎಂದರು.
ವರದಿಯು ದಿಲ್ಲಿ,ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿಯ ದೌರ್ಜನ್ಯಗಳ ಸಂತ್ರಸ್ತರು ಮತ್ತು ಅವರ ಕುಟುಂಬಗಳ ನೂರಕ್ಕೂ ಹೆಚ್ಚಿನ ಸಂದರ್ಶನಗಳು ಮತ್ತು ಹೇಳಿಕೆಗಳು, ಜೊತೆಗೆ ಕಾನೂನು ತಜ್ಞರು,ವಿದ್ವಾಂಸರು,ಸಾಮಾಜಿಕ ಹೋರಾಟಗಾರರು ಮತ್ತು ಪೊಲಿಸ್ ಅಧಿಕಾರಿಗಳ ಅಭಿಪ್ರಾಯಗಳನ್ನು ಆಧರಿಸಿದೆ.