ಸೀಲ್ಡೌನ್ ಆಗಿರುವ ವಾರ್ಡ್ಗಳಲ್ಲಿ ಇನ್ನೂ ನಿಂತಿಲ್ಲ ಜನಸಂಚಾರ: 350 ವಾಹನಗಳು ಜಪ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.12: ಕೊರೋನ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಬಿಬಿಎಂಪಿ ವ್ಯಾಪ್ತಿಯ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಎರಡು ವಾರ್ಡ್ಗಳನ್ನು ಸೀಲ್ಡೌನ್ ಮಾಡಲಾಗಿದೆ. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಇಲ್ಲಿನ ಜನರು ಎಂದಿನಂತೆ ಹೊರಗೆ ಸಂಚರಿಸುತ್ತಿದ್ದಾರೆ.
ಸೀಲ್ಡೌನ್ ಮಾಡಲಾಗಿರುವ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ಗಳ ಜನರು ತೀರಾ ತುರ್ತು ಸಂದರ್ಭವನ್ನು ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಅವರಿಗೆ ಬೇಕಾದ ಅಗತ್ಯ ಸಾಮಾನುಗಳು ಮತ್ತು ಆಹಾರ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕೊರೋನ ನಿಯಂತ್ರಿಸಲು ಬಿಬಿಎಂಪಿ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ತಲೆಕೆಡಿಸಿಕೊಳ್ಳದ ಇಲ್ಲಿನ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
ಜೆ.ಜೆ. ನಗರ, ಪಾದರಾಯನಪುರದಲ್ಲಿ ಭಾನುವಾರವೂ ಜನಜೀವನ ಎಂದಿನಂತೆಯೇ ಇದೆ. ಈ ಎರಡು ವಾರ್ಡ್ಗಳನ್ನು ಬಿಬಿಎಂಪಿ ಸೀಲ್ಡೌನ್ ಮಾಡಿದ್ದರೂ ಸಾರ್ವಜನಿಕರು ಮತ್ತು ವಾಹನ ಸವಾರರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಏನೇನೋ ನೆಪ ಹೇಳಿಕೊಂಡು ಎಂದಿನಂತೆ ಸುತ್ತಾಟ ನಡೆಸಿದ್ದಾರೆ. ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದರು ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ತರಕಾರಿ, ದಿನಸಿ ವಸ್ತುಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಸುತ್ತಾಟ ನಡೆಸಿದ್ದಾರೆ. ಸೀಲ್ಡೌನ್ ಜಾರಿಗೊಳಿಸಿದರೂ ಈ ಎರಡು ವಾರ್ಡ್ಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಜೆ.ಜೆ ನಗರಕ್ಕೆ ಪ್ರವೇಶವಾಗುವ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಲಾಗುತ್ತಿದೆ. ಜನರು, ವಾಹನಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಪ್ರತಿಯೊಬ್ಬರಿಗೂ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.
350 ವಾಹನ ಜಪ್ತಿ
ಬಾಪೂಜಿನಗರ ಮತ್ತು ಪಾದರಾಯನಪುರ ಬಳಿ ವಿನಾಕಾರಣ ಯಾರು ಓಡಾಟ ಮಾಡುವ ಹಾಗಿಲ್ಲ. ತುರ್ತು ಆರೋಗ್ಯ ಸೇವೆಗೆ ಮಾತ್ರ ರಸ್ತೆಗೆ ಇಳಿಯಬೇಕು ಎಂದು ಜಾಗೃತಿ ಕೂಡ ಮೂಡಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಅನಗತ್ಯವಾಗಿ ಸಂಚಾರ ಮಾಡಿದ 350ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಾಹಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.







