ಭಾರತದ 718 ಜಿಲ್ಲೆಗಳಲ್ಲಿ ಅರ್ಧದಷ್ಟು ಕೊರೋನ ಪೀಡಿತ!
'ರೆಡ್', 'ಆರೆಂಜ್', 'ಗ್ರೀನ್' ಝೋನ್ ಗಳ ಗುರುತಿಗೆ ಕೇಂದ್ರ ನಿರ್ಧಾರ

ಹೊಸದಿಲ್ಲಿ: ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಮೂರನೇ ವಾರಕ್ಕೆ ಕಾಲಿಟ್ಟಿರುವ ನಡುವೆಯೇ ದೇಶದ 718 ಜಿಲ್ಲೆಗಳ ಪೈಕಿ ಅರ್ಧದಷ್ಟು ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಸೋಂಕು ಹರಡಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ ಎಂದು ndtv.com ವರದಿ ಮಾಡಿದೆ
ವಿಶ್ವಾದ್ಯಂತ 16 ಲಕ್ಷ ಮಂದಿಯನ್ನು ಬಾಧಿಸಿ, ಒಂದು ಲಕ್ಷಕ್ಕೂ ಹೆಚ್ಚು ಜೀವಗಳನ್ನು ಈ ಮಾರಕ ಸೋಂಕು ಬಲಿ ಪಡೆದಿದೆ. ಕಳೆದ 10 ದಿನಗಳಲ್ಲಿ ಈ ಸೋಂಕು ಹೊಸದಾಗಿ 120 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳನ್ನು ಉಲ್ಲೇಖಿಸಿ ndtv.com ವರದಿ ಮಾಡಿದೆ.
ಈ ದಿಢೀರ್ ಏರಿಕೆಯ ಪರಿಣಾಮವಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದೇ ವಾರದಲ್ಲಿ ದ್ವಿಗುಣಗೊಂಡಿದೆ. ಕಳೆದ ರವಿವಾರ 3500ರಷ್ಟಿದ್ದ ಸೋಂಕಿತರ ಸಂಖ್ಯೆ ಇದೀಗ 8356ಕ್ಕೇರಿದೆ. ಮಾರ್ಚ್ 29ರಂದು 160 ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಸಾಂಕ್ರಾಮಿಕ ಏಪ್ರಿಲ್ 6ರ ವೇಳೆಗೆ 284 ಜಿಲ್ಲೆಗಳನ್ನು ವ್ಯಾಪಿಸಿತ್ತು. ಇದೀಗ 364ಕ್ಕೂ ಹೆಚ್ಚು ಜಿಲ್ಲೆಗಳು ಬಾಧಿತವಾಗಿವೆ.
ದೇಶದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಗರಿಷ್ಠ (40) ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತಮಿಳುನಾಡಿನ 33 ಜಿಲ್ಲೆಗಳಲ್ಲೂ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ದೇಶದಲ್ಲೇ ಅತ್ಯಧಿಕ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದ 27 ಜಿಲ್ಲೆಗಳಲ್ಲಿ ಸೋಂಕು ಇದ್ದು, ದೆಹಲಿಯ 11 ಜಿಲ್ಲೆಗಳಲ್ಲಿ ಕೂಡಾ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಮಾರ್ಚ್ 25ರಂದು ಆರಂಭವಾಗಿರುವ 21 ದಿನಗಳ ಲಾಕ್‍ಡೌನ್ ಮಂಗಳವಾರ ಮುಗಿಯಲಿದ್ದು, ಮುಂದಿನ ಹಂತದಲ್ಲಿ ದೇಶದ ನಕ್ಷೆಯನ್ನು ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಕೆಂಪು, ಕಿತ್ತಳೆ ಮತ್ತು ಹಸಿರು ಎಂದು ವರ್ಗೀಕರಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದು ಸಾಂಕ್ರಾಮಿಕ ಅಧಿಕ ಇರುವ ಹಾಗೂ ವೈರಸ್ ಮುಕ್ತ ವಲಯಗಳನ್ನು ಪತ್ತೆ ಮಾಡಲು ಸುಲಭವಾಗಲಿದೆ ಎಂದು ಹೇಳಲಾಗಿದೆ.







