ಕಾರ್ಕಳದ ಕ್ವಾರೆಂಟೈನ್ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ
ಉಡುಪಿ, ಎ.12: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಶನಿವಾರ ತಾಲೂಕಿನ ಕೊರೋನ ವೈರಸ್‌ನ ಶಂಕಿತರು ಹಾಗೂ ಶಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ವಹಿಸಲು ಪ್ರಾರಂಭಿಸಲಾದ ಕ್ವಾರೆಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಲದೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಜಿಪಂ ಸಿಇಓ, ಎಸ್ಪಿ, ಎಸಿ, ಡಿಎಚ್‌ಓ, ಎಡಿಸಿ, ಜಿಲ್ಲಾ ಕೊರೋನ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ತಾಪಂ ಇಒಗಳ ಸಭೆ ನಡೆಸಿ ಜಿಲ್ಲಾಡಳಿತ ಕಂಟೈನ್‌ಮೆಂಟ್ ಯೋಜನೆಯ ಕುರಿತು ಸಭೆ ನಡೆಸಿದರು.
ಈ ನಡುವೆ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇಂದು ಸಹ ತಮ್ಮ ತಾಲೂಕು ಆರೋಗ್ಯ ಕೇಂದ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ಮನೆಮನೆಗೆ ಭೇಟಿ ನೀಡಿ ಕೋವಿಡ್-19ರ ಬಗ್ಗೆ ಜಾಗೃತಿ ಹಾಗೂ ಮಾಹಿತಿ ಅಭಿಯಾನ ನಡೆಸಿದರು.
ಅಲ್ಲದೇ ಸಾಮಾಜಿಕ ಅಂತರದ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಿ ಅದನ್ನು ಪ್ರತಿನಿತ್ಯ ಬಳಸಬೇಕಾದ ಅನಿವಾರ್ಯತೆಯ ಕುರಿತು ಮನದಟ್ಟು ಮಾಡಿದರು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಕಾರ್ಕಳ ತಾಲೂಕಿನ ಹೆಬ್ರಿ, ಇರ್ವತ್ತೂರು, ಬೆಳ್ಮಣ್ಣು, ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ, ಗಂಗೊಳ್ಳಿ, ನಾಡ, ಉಡುಪಿ ತಾಲೂಕಿನ ಪೆರ್ಣಂಕಿಲ, ಬಾರಕೂರುಗಳಲ್ಲಿ ಮನೆ ಮನೆಗೆ ಭೇಟಿ ನೀಡಿದರು.







