ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಚೆಕ್‌ಪೋಸ್ಟ್‌ಗಳಲ್ಲಿ ತಡೆ ಬೇಡ:ಉಡುಪಿ ಡಿಸಿಗೆ ಜಿಲ್ಲಾ ಕೃಷಿಕ ಸಂಘ ಮನವಿ
ಉಡುಪಿ, ಎ.12: ಜಿಲ್ಲೆಗೆ ಅಗತ್ಯವಿರುವ ಹಲವು ಆಹಾರ, ದವಸಧಾನ್ಯಗಳ ಸಹಿತ ಬಾಳೆಹಣ್ಣು, ತರಕಾರಿಗಳು ಶಿವಮೊಗ್ಗ, ಶೃಂಗೇರಿ, ಕೊಪ್ಪ ಹಾಗೂ ಚಿಕ್ಕ ಮಗಳೂರು ಪ್ರದೇಶಗಿಂದ ಬರುತ್ತಿವೆ. ಇವುಗಳು ಹುಲಿಕಲ್ ಘಾಟಿ, ಆಗುಂಬೆ, ಕುದುರೆಮುಖ, ಮಾಳ ಚೆಕ್‌ಪೋಸ್ಟ್ ಮೂಲಕ ಜಿಲ್ಲೆಯನ್ನು ಪ್ರವೇಶಿಸುತ್ತವೆ. ಇದೀಗ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇವುಗಳ ಸಂಚಾರಕ್ಕೆ ಈಗಲೂ ತೊಂದರೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಹೇಳಿದೆ.
ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪತ್ರವೊಂದನ್ನು ಬರೆದಿರುವ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಲಾಕ್‌ಡೌನ್ ನಿಂದಾಗಿ ಜಿಲ್ಲೆ ಯ ಕೃಷಿಕರಿಗೆ ಉಂಟಾಗಿರುವ ಸಮಸ್ಯೆಗಳು, ಅದರಿಂದ ಮುಂದಾಗಬಹುದಾದ ಆಹಾರ ಸಾಮಾಗ್ರಿಗಳ ಕೊರತೆ- ಸಮಸ್ಯೆಗಳ ಬಗ್ಗೆ ಆರಂಭದಲ್ಲೇ ನಾವು ತಮ್ಮ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದಿಸಿರುವುದಕ್ಕೆ ಜಿಲ್ಲೆಯ ಕೃಷಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸು ತ್ತೇವೆ ಎಂದವರು ಹೇಳಿದ್ದಾರೆ.
ಆದರೆ ಈಗಲೂ ಈ ಆಹಾರ ವಸ್ತುಗಳನ್ನು ಸಾಗಿಸುವಾಗ ಚೆಕ್ ಪೋಸ್ಟ್‌ಗಳಲ್ಲಿ ತೋಟಗಾರಿಕೆ, ಕೃಷಿ ಇಲಾಖೆ ಅಥವಾ ಎಪಿಎಂಸಿಯ ಪಾಸ್ ತೋರಿಸಿದರೆ ಸಾಲುವುದಿಲ್ಲ. ಪೊಲೀಸ್ ಇಲಾಖೆ ಅನುಮತಿ ಪತ್ರ ಕೇಳುತ್ತ ಈಗಲೂ ತಡೆ ಒಡ್ಡುತ್ತಿದ್ದಾರೆಂಬ ಮಾಹಿತಿಗಳಿವೆ. ಹೀಗೆ ಚೆಕ್‌ಪೋಸ್ಟ್ ಗಳಲ್ಲಿ ಸಾಗಾಟ ವಾಹನ ಗಳು ದಿನಗಟ್ಟಲೆ ನಿಲುಗಡೆಯಾದರೆ ದವಸ-ಧಾನ್ಯಗಳಿಗೆ ಸಮಸ್ಯೆಯಾಗ ದಿದ್ದರೂ, ತರಕಾರಿ, ಬಾಳೆಹಣ್ಣುಗಳು ಒಂದೆರಡು ದಿನಗಳಲ್ಲೆ ಹಣ್ಣಾಗಿ ಕೊಳೆತು ಹೋಗುತ್ತವೆ. ಇದು ಅತ್ತ ಕೃಷಿಕರಿಗೆ ನಷ್ಟ ಉಂಟುಮಾಡಿದರೆ, ಇತ್ತ ಆಹಾರ ವಸ್ತುಗಳ ಕೊರತೆ, ಜನರ ನೂಕು ನುಗ್ಗಾಟ, ಬೆಲೆ ಏರಿಕೆ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಆದ್ದರಿಂದ ನಿರ್ದಿಷ್ಟ ಬೆಳೆಗಳು, ತರಕಾರಿ, ಹಣ್ಣು ಹಂಪಲುಗಳನ್ನು ನಮೂದಿಸಿ ಅವುಗಳ ಸಾಗಾಟಕ್ಕಾಗಿ ಕೃಷಿ ಸಂಬಂಧಿ ಯಾವುದೇ ಒಂದು ಇಲಾಖೆ -ಕೃಷಿ ಇಲಾಖೆ/ ತೋಟಗಾರಿಕಾ ಇಲಾಖೆ/ಎಪಿಎಂಸಿ- ನೀಡಿರುವ ಕೃಷಿ ಉತ್ಪನ್ನಗಳ ಪಾಸ್ ಚೆಕ್‌ಪೋಸ್ಟ್‌ಗಳಲ್ಲಿ ಮಾನ್ಯವಾಗುವ ರೀತಿ ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇವೆ ಎಂದವರು ಹೇಳಿದ್ದಾರೆ.
ಈ ಮಧ್ಯೆ ಪಾಸುಗಳ ದುರುಪಯೋಗ, ಕೊರೋನ ಬಗ್ಗೆ ಜಿಲ್ಲಾಡಳಿತ/ಸರಕಾರ ರೂಪಿಸಿರುವ ನಿಯಮ ನಡಾವಳಿಗಳ ಉಲ್ಲಂಘನೆಯಾದಲ್ಲಿ ಮಾತ್ರ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಮಾಹಿತಿ/ಆದೇಶ ಚೆಕ್‌ಪೋಸ್ಟ್ ಸಿಬ್ಬಂದಿಗಳಿಗೆ ನೀಡುವಂತೆ ರವೀಂದ್ರ ಗುಜ್ಜರಬೆಟ್ಟು ಜಿಲ್ಲಾಧಿಕಾರಿಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.







