ಆಶಾ ಕಾರ್ಯಕರ್ತೆಗೆ ಬೆದರಿಕೆ ಪ್ರಕರಣ: ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್‌ಡಿಪಿಐ ಒತ್ತಾಯ
ಮಂಗಳೂರು, ಎ.12: ಮಂಗಳೂರು ಗ್ರಾಮಂತರ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಮಲ್ಲೂರು ಸಮೀಪದ ಬದ್ರಿಯ ನಗರದಲ್ಲಿ ಆಶಾ ಕಾರ್ಯಕರ್ತೆ ವಸಂತಿ ಎಂಬಾಕೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಪೊಲೀಸರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ವಾಸ್ತವತೆ ಮತ್ತು ಸತ್ತಾಸತ್ಯತೆ ಬಯಲಿಗೆಳೆಯಬೇಕಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಪ್ರತೀ ಮನೆಗೆ ತೆರಳಿ ಬಾಣಂತಿಯರ ಮತ್ತು ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಪಡೆಯುತ್ತಿದ್ದರು. ಅದರಂತೆ ಮಲ್ಲೂರಿನ ಅಶ್ರಫ್ ಎಂಬವರ ಮನೆಗೆ ತೆರಳಿ ಆಧಾರ್ ಮತ್ತು ರೇಶನ್ ಕಾರ್ಡ್ ಕೇಳಿದಾಗ ಅಶ್ರಫ್ ಮನೆಯವರು ಗೊಂದಲಕ್ಕೀಡಾಗಿ ಸಂಬಂಧಿಕರಾದ ಎಸ್‌ಡಿಪಿಐ ಕಾರ್ಯಕರ್ತ ಇಸ್ಮಾಯಿಲ್ ಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಅದರಂತೆ ಇಸ್ಮಾಯಿಲ್ ತಕ್ಷಣ ಅಲ್ಲಿಗೆ ಆಗಮಿಸಿ ಬಾಣಂತಿಯರ ವಿಚಾರಕ್ಕೆ ಸಂಬಂಧಿಸಿ ಆಧಾರ್, ರೇಶನ್ ಕಾರ್ಡ್ ಯಾಕೆಂದು ಪ್ರಶ್ನಿಸಿದಾಗ ಆಶಾ ಕಾರ್ಯಕರ್ತೆ ತನ್ನ ಮೇಲಾಧಿಕಾರಿಗಳ ಗಮನ ಸೆಳೆಯುತ್ತಾರೆ. ಈ ವೇಳೆ ಇಸ್ಮಾಯಿಲ್ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಇಂದಿರಾರನ್ನು ಘಟನೆ ನಡೆದ ಸ್ಥಳಕ್ಕೆ ಕರೆಸಿ ವಾಸ್ತವಾಂಶ ಮನದಟ್ಟು ಮಾಡಿಕೊಟ್ಟಿದ್ದಾರೆ. ಈ ವೇಳೆ ಇಂದಿರಾರ ಬಳಿ ಆಶಾ ಕಾರ್ಯಕರ್ತೆ ವಸಂತಿ ತನಗೆ ಯಾರೂ ಬೈಯಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಂತರದ ಬೆಳವಣಿಗೆಯಲ್ಲಿ ಪೂರ್ವ ನಿಯೋಜಿತವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆಂಬ ಆರೋಪ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯವಾಗಿದೆ. ಘಟನೆ ನಡೆದ ಸ್ಥಳದ ಮಾತುಕತೆಯ ವಿವರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಸ್ತವವಾಗಿ ಏನು ನಡೆದಿದೆ ಎಂಬುದನ್ನು ಅದರಿಂದ ತಿಳಿಯಬಹುದಾಗಿದೆ. ಆಶಾ ಕಾರ್ಯಕರ್ತೆಯು ತನಗೇನೂ ಆಗಿಲ್ಲ ಎಂದಿದ್ದರೂ ಕೂಡ ರಾಜಕೀಯ ಬಣ್ಣ ಬಳಿದು ಪ್ರಕರಣ ದಾಖಲಿಸಿ ಬಂಧಿಸಿರುವುದು ಅಕ್ಷಮ್ಯವಾಗಿದೆ. ಹಾಗಾಗಿ ಪೊಲೀಸ್ ಇಲಾಖೆಯು ಸಮರ್ಪಕ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.





