ಕಾರ್ಕಳ, ಹೆಬ್ರಿಯಲ್ಲಿ ಆಲಿಕಲ್ಲು ಮಳೆ: ಹಲವೆಡೆ ಹಾನಿ

ಉಡುಪಿ, ಎ.12: ಉಡುಪಿ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಹಲವೆಡೆ ಆಲಿಕಲ್ಲು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಪುರಸಭಾ ವ್ಯಾಪ್ತಿಯ ಹವಲ್‌ದಾರ್‌ಬೆಟ್ಟು, ಕಾಬೆಟ್ಟು, ಕರಿಯ ಕಲ್ಲು, ಪೆರ್ವಾಜೆ, ಕುಂಬ್ರಿಪದವು, ಪತೊಂಜಿಕಟ್ಟೆ, ಕುಂಟ್ಪಾಡಿ, ಹಿರಿಯಂಗಡಿ ಹಾಗೂ ತಾಲೂಕಿನ ಮಿಯ್ಯಾರು, ಸಾಣೂರು, ಎರ್ಲಪಾಡಿ, ಮೂಡಾರು, ಕೆರ್ವಾಸೆ, ಅಂಡಾರು, ಮುಂಡ್ಕೂರು, ನಿಟ್ಟೆ, ಹಿರ್ಗಾನ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ.
ಹೆಬ್ರಿ ತಾಲೂಕಿನ ಮುನಿಯಾಲು, ಶಿವಪುರ, ಪಡುಕುಡೂರು, ಖಜಾನೆ ಎಳ್ಳಾರೆ, ಹೆಬ್ರಿ ಬೇಳಂಜೆ, ಮುದ್ರಾಡಿ, ಕುಚ್ಚೂರು, ಕಬ್ಬಿನಾಲೆ ಸೇರಿದಂತೆ ವಿವಿದೆಡೆ ಗುಡುಗು, ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಅದೇ ರೀತಿ ಬೇಳಂಜೆ ಹಾಗೂ ಕಬ್ಬಿನಾಲೆ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿರು ವುದಾಗಿ ತಿಳಿದುಬಂದಿದೆ.
ಹೆಬ್ರಿ ಸಮೀಪದ ಮುಳ್ಳುಗಡ್ಡೆ ಅಂಗನವಾಡಿ ಕೇಂದ್ರದ ಹೆಂಚು ಹಾರಿ ಅಪಾರ ಹಾನಿ ಸಂಭವಿಸಿದೆ. ಶಿವಪುರ ಒಳಬೈಲು ಕೃಷ್ಣ ನಾಯ್ಕೆ ಎಂಬವರ ಮನೆಯ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ. ಅದೇ ರೀತಿ ಶಿವಪುರ ಪರಿಸರದಲ್ಲಿ ಐದಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿರುವ ಬಗ್ಗೆ ಮೂಲಗಳು ತಿಳಿಸಿವೆ.
ಉಡುಪಿ ತಾಲೂಕಿನ ಕೆಲವೆಡೆ ಸಾದಾರಣ ಮಳೆಯಾಗಿದ್ದು, ನಗರದಲ್ಲೂ ಗುಡುಗು ಸಹಿತ ಮಳೆಯಾಗುವ ಮೂಲಕ ವಾತಾವರಣ ತಂಪಾಗಿ ಸಿತು. ಕುಂದಾಪುರ ತಾಲೂಕಿನ ಹಾಲಾಡಿ, ಬೈಂದೂರು, ಕೊಲ್ಲೂರು, ಗೋಳಿ ಯಂಗಡಿ, ಬೆಳ್ವೆ ಸೇರಿದಂತೆ ಹಲವೆಡೆ ಸಾದಾರಣ ಮಳೆ ಯಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರೀ ಮಳೆ ಯಾಗಿತ್ತು.









