ಮೈಸೂರು: ಕೊರೋನ ವೈರಸ್ ಸೋಂಕಿತ 7 ಮಂದಿ ಗುಣಮುಖ

ಸಾಂದರ್ಭಿಕ ಚಿತ್ರ
ಮೈಸೂರು,ಎ.12: ಮೈಸೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದ ಕೊರೋನ ಸೋಂಕಿತರ ಸಂಖ್ಯೆ ರವಿವಾರ ಇಳಿಮುಖವಾಗಿದೆ. ಕೊರೋನ ಸೋಂಕಿತ ಏಳು ಮಂದಿ ರವಿವಾರ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 45 ಇದ್ದ ಕೊರೋನ ಸೋಂಕಿತರ ಸಂಖ್ಯೆ 38ಕ್ಕೆ ಇಳಿದಿತ್ತಾದರೂ ಸಂಜೆ ಮತ್ತೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಪ್ರಗತಿಯಲ್ಲಿರುವ ಸೋಂಕಿತರ ಸಂಖ್ಯೆ 39 ಆಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಜ್ಯುಬಿಲಿಯಂಟ್ ಕಂಪನಿಯ ರೋಗಿ 88ರ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಕೊರೋನ ಸೋಂಕು ತಗುಲಿದ್ದು, ಅವರನ್ನು ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 3,555 ಮಂದಿ ಕ್ವಾರಂಟೈನ್ನಲ್ಲಿದ್ದು, 1978 ಮಂದಿ 14 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 1,531 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾದ್ದು, 896 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಅದರಲ್ಲಿ 848 ಮಂದಿಗೆ ನೆಗೆಟಿವ್ ಬಂದಿದೆ. ಇಂದು ಓರ್ವ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಸೇರಿ ಜಿಲ್ಲೆಯಲ್ಲಿ ಒಟ್ಟು 39 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.





