ರೈತರ ಬೆಳೆಗಳಿಗೆ ಕೂಡಲೇ ಬೆಂಬಲ ಬೆಲೆ ಘೋಷಿಸಿ: ಡಿ.ಕೆ.ಶಿವಕುಮಾರ್ ಒತ್ತಾಯ

ಬೆಂಗಳೂರು, ಎ.12: ರಾಜ್ಯದ ಎಲ್ಲ ಭಾಗಗಳಲ್ಲಿನ ರೈತರ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿ, ಕೂಡಲೇ ಅವರ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ರವಿವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್ ತಾಲೂಕಿನ ವಿವಿಧ ಭಾಗಗಳ ಹೂ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಸಂಕಷ್ಟಗಳನ್ನು ಆಲಿಸಿದ ಅವರು, ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ತೋಟಗಳಲ್ಲಿಯೇ ಹಾಳಾಗುತ್ತಿವೆ. ಈ ಬಗ್ಗೆ ಸರಕಾರ ಕೂಡಲೇ ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಿ, ಯಾವೊಬ್ಬ ರೈತನಿಗೂ ಅನ್ಯಾಯವಾಗಲು ಬಿಡುವುದಿಲ್ಲವೆಂದು ಭರವಸೆ ನೀಡಿದ್ದರು. ಹೀಗೆ ಹೇಳಿ ನಾಲ್ಕೈದು ದಿನಗಳಾದರೂ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಶೀಲಿಸಲು ಈವರೆಗೂ ಯಾವುದೇ ಅಧಿಕಾರಿ ಇಲ್ಲಿಗೆ ಆಗಮಿಸಿಲ್ಲ. ನಮ್ಮ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯ ಸರಕಾರ ತಕ್ಷಣವೇ ಅಧಿಕಾರಿಗಳನ್ನು ಪ್ರತಿ ಹಳ್ಳಿಗಳಿಗೆ ಕಳುಹಿಸಿ ಮಾರುಕಟ್ಟೆ ಹಾಗೂ ಬೇಡಿಕೆ ಇಲ್ಲದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕಲ್ಪಿಸಬೇಕು. ರೈತನಿಗೆ ಯಾವುದೇ ಲಂಚ ಸಿಗಲ್ಲ, ಯಾವುದೇ ಪಿಂಚಣಿ ಸಿಗಲ್ಲ. ಅವನು ಬೆಳೆದಿದ್ದರಲ್ಲೇ ಸಂಪಾದನೆ ಮಾಡಿ ಬದುಕಬೇಕು. ಇದನ್ನು ಅರ್ಥ ಮಾಡಿಕೊಂಡು ರೈತರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಬೇಕೆಂದು ಅವರು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಆನೇಕಲ್ ಕ್ಷೇತ್ರದ ಶಾಸಕ ಶಿವಣ್ಣ ಜತೆಗಿದ್ದರು.






.jpg)
.jpg)

