ಕೋಮು ಪ್ರಚೋದಕ ಪೋಸ್ಟ್ : ಬಂಟ್ವಾಳ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

ಬಂಟ್ವಾಳ, ಎ.12: ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿರುವ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಜಿಪ ಮುನ್ನೂರು ಆಲಂಪಾಡಿ ಯುನಿಟ್ ಅಧ್ಯಕ್ಷ ಮುಹಮ್ಮದ್ ಶರೀಫ್ ಎಂಬವರು ನೀಡಿದ ದೂರಿನಂತೆ ಆಲಾಡಿ ನಿವಾಸಿ ಯಶು ಗಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
''ಕಾಸರಗೋಡು ಭಾರತದ ವುಹಾನ್ ! ನಿನ್ನೆ ಒಂದೇ ದಿನಕ್ಕೆ 34 ಪಾಸಿಟಿವ್. ಮಕ್ಕಾ, ದುಬೈಗಳಿಂದ ಹೊತ್ತು ತಂದ ಅಲ್ಲಾಹನ ಪರಮ ಪ್ರಸಾದ'' ಎಂದು ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರಹ ಹಾಕಿದ್ದು ಈ ಮೂಲಕ ಒಂದು ಸಮುದಾಯವನ್ನು ಅವಹೇಳನ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಒಂದು ಸಮುದಾಯದ ವಿರುದ್ಧ ಕೋಮು ಪ್ರಚೋದಕ ಪೋಸ್ಟ್ ಹಾಕುವ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಉದ್ದೇಶವನ್ನು ಹೊಂದಿರುವುದರಿಂದ ಆರೋಪಿತನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





