ತುರ್ತು ಸೇವೆಗೆ ಮಂಗಳೂರು ವಿಮಾನ ನಿಲ್ದಾಣ ಸದಾ ಸಿದ್ಧ : ಜೈಶಂಕರ್
ಕೊರೋನ ವೈರಸ್ ಹಿನ್ನೆಲೆ
ಮಂಗಳೂರು, ಎ.12: ಕೊರೋನ ನಿಗ್ರಹದ ನಿಟ್ಟಿನಲ್ಲಿ ದೇಶದ ವಿಮಾನಯಾನ ಸಚಿವಾಲಯವು ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ವಿಮಾನ ಸಂಚಾರ ಬಂದ್ ಆಗಿದೆ. ಆದರೂ, ತುರ್ತು ಸಂದರ್ಭದಲ್ಲಿ ಯಾವುದೇ ವಿಮಾನ, ಹೆಲಿಕಾಪ್ಟರ್ ಬರುವುದಿದ್ದರೂ ಏರ್‌ಪೋರ್ಟ್‌ನ ಅನುಮತಿ ಪಡೆದು ಲ್ಯಾಂಡ್ ಆಗಲು ಬೇಕಾದ ವ್ಯವಸ್ಥೆ ಸದ್ಯ ಜಾರಿಯಲ್ಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ಬೆರಳೆಣಿಕೆ ಸಿಬ್ಬಂದಿ ವರ್ಗ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಯಾವುದೇ ವಿಮಾನ, ಹೆಲಿಕಾಪ್ಟರ್‌ಗಳು ಆಗಮಿಸುವುದಾದರೆ ಅದಕ್ಕೆ ಈ ಸಿಬ್ಬಂದಿ ವರ್ಗವು ಕರ್ತವ್ಯ ನಿರ್ವಹಿಸಲು ಸಿದ್ಧವಾಗಿದೆ. ದಿನದ 24 ಗಂಟೆಗೆ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಏರ್‌ಪೋರ್ಟ್‌ನ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಸದ್ಯ ಲಾಕ್‌ಡೌನ್ ಮಧ್ಯೆಯೂ ಮಧ್ಯಾಹ್ನದವರೆಗೆ ಕಾರ್ಯಾಚರಣೆಯಲ್ಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಡೆಸುತ್ತಿದ್ದು, ತುರ್ತಾಗಿ ವಿಮಾನ ಲ್ಯಾಂಡ್ ಆಗಬೇಕಿದ್ದರೆ ಈ ವೇಳೆಯಲ್ಲಿ ಬರಬಹುದು. ಅದಕ್ಕೂ 1 ತಾಸು ಮುನ್ನ ವಿಮಾನ ನಿಲ್ದಾಣದ ಅನುಮತಿ ಪಡೆಯಬೇಕಾಗಿದೆ. ಚೆನ್ನೈ ಹಾಗೂ ತಿರುವನಂತಪುರ ವಿಮಾನ ನಿಲ್ದಾಣದ ಎಟಿಸಿ 24 ಗಂಟೆಯೂ ಈಗಲೂ ಕಾರ್ಯಾಚರಿಸುತ್ತಿದೆ.
ಲಾಕ್‌ಡೌನ್ ಬಳಿಕ ನೌಕಾಪಡೆ ಹಾಗೂ ವಾಯುಪಡೆಯ ಕೆಲವು ಹೆಲಿಕಾಪ್ಟರ್‌ಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಇವು ಹಳೆ ಏರ್‌ಪೋರ್ಟ್‌ನ ರನ್ ವೇ ಭಾಗದಲ್ಲಿ ಲ್ಯಾಂಡ್ ಆಗಿವೆ. ವಿಮಾನ ಸಂಚಾರ ಸಂಪೂರ್ಣ ಸ್ಥಗಿತವಾದ ಕಾರಣದಿಂದ ವಿಮಾನಗಳನ್ನು ವಿವಿಧ ಏರ್‌ಪೋರ್ಟ್‌ಗಳಲ್ಲಿ ಸದ್ಯ ನಿಲ್ಲಿಸಲಾಗಿದೆ. ಅದೇ ರೀತಿ ಮಂಗಳೂರು ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ ಕೆಲವು ವಿಮಾನಗಳನ್ನು ನಿಲ್ಲಿಸಲಾಗಿದೆ. ವಿಮಾನ ನಿಲ್ದಾಣದ ಅಗ್ನಿಶಾಮಕದಳದ ಸಿಬ್ಬಂದಿಯು ಸದಾ ಸೇವೆಯಲ್ಲಿದ್ದಾರೆ. ಲಾಕ್‌ಡೌನ್ ಬಳಿಕ ವಿಮಾನ ನಿಲ್ದಾಣದ ಹೊರಭಾಗದ ಗುಡ್ಡಕ್ಕೆ ಬೆಂಕಿ ಬಿದ್ದು ಆತಂಕ ಸೃಷ್ಟಿಯಾಗಿತ್ತು. ಈ ಸಂದರ್ಭ ಏರ್‌ಪೋರ್ಟ್‌ನ ಅಗ್ನಿಶಾಮಕದಳ ಹಾಗೂ ಮಂಗಳೂರಿನ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತ್ತು ಎಂದು ತಿಳಿದು ಬಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಿಸುವ ಸಮಯದಲ್ಲಿ ಪ್ರತೀ ದಿನ 26 ಆಗಮನ ಹಾಗೂ 26 ನಿರ್ಗಮನ ವಿಮಾನ ನಿರ್ವಹಣೆಯಾಗುತ್ತಿತ್ತು. ಆದರೆ ಕೊರೋನ ಹಿನ್ನೆಲೆಯಲ್ಲಿ ಮಾರ್ಚ್ ಎರಡನೇ ವಾರದಲ್ಲೇ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಯವಾಗಿತ್ತು.
ಮಂಗಳೂರು ಏರ್‌ಪೋರ್ಟ್‌ನ ಏರ್‌ಲೈನ್ಸ್, ಹೊಟೇಲ್, ಟವರ್, ಲೋಡರ್, ಟರ್ಮಿನಲ್, ಆಡಳಿತ ವಿಭಾಗ ಸೇರಿದಂತೆ ಬೇರೆ ಬೇರೆ ವಲಯದ ಮೂರೂ ಪಾಳಿಗಳಲ್ಲಿ ಪ್ರತೀ ದಿನ 1,500ಕ್ಕೂ ಅಧಿಕ ಜನರು ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ ಭದ್ರತಾ ಪಡೆ, ಅಗ್ನಿಶಾಮಕದಳ, ಟವರ್ ಸೇರಿದಂತೆ ನಿಲ್ದಾಣದ ಸಿಬ್ಬಂದಿ, ಸ್ವಚ್ಚತಾ ವಿಭಾಗ ಸಹಿತ 300ರಷ್ಟು ಜನರು ಕರ್ತವ್ಯಕ್ಕೆ ಸದ್ಯ ಹಾಜರಾಗುತ್ತಿದ್ದಾರೆ. ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಏರ್‌ಪೋರ್ಟ್ ಸದ್ಯ ಪ್ರಯಾಣಿಕರೇ ಇಲ್ಲದೆ ಬಿಕೋ ಎನ್ನುತ್ತಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಮಾನಯಾನ ಸ್ಥಗಿತಗೊಂಡಿದ್ದರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿವಾರ್ಯ ಸಂದರ್ಭ ಯಾವುದೇ ವಿಮಾನ, ಹೆಲಿಕಾಪ್ಟರ್‌ಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಂಬಂಧಿಸಿದ ಅನುಮತಿ ಪಡೆದು ಆಗಮಿಸಲು ಅವಕಾಶವಿದೆ. ಉಳಿದಂತೆ ಪ್ರಯಾಣಿಕರಿಲ್ಲದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಸಿಬ್ಬಂದಿಯ ಸಂಖ್ಯೆ ಕಡಿಮೆ ಇದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಣಿಜ್ಯ ವ್ಯವಸ್ಥಾಪಕ ಜೈಶಂಕರ್ ತಿಳಿಸಿದ್ದಾರೆ.







