ಕೊರೋನ ವೈರಸ್: ರೆಡ್, ಆರೆಂಜ್, ಗ್ರೀನ್ ಝೋನ್ ಪ್ರದೇಶಗಳು ಹೀಗಿರಲಿವೆ…

ಹೊಸದಿಲ್ಲಿ, ಎ.12: ಟ್ರಾಫಿಕ್ ದೀಪಗಳಲ್ಲಿ ಬಳಸುವ ಕೆಂಪು, ಕಿತ್ತಳೆ ಮತ್ತು ಹಸಿರು ಬಣ್ಣದ ಸಂಕೇತವನ್ನು ಇನ್ನು ಮುಂದೆ ಕೊರೋನ ವೈರಸ್ ಸೋಂಕು ಪೀಡಿತ ಮತ್ತು ಸೋಂಕು ರಹಿತ ವಲಯಗಳನ್ನು ಗುರುತಿಸಲು ಹಾಗೂ ಜನರ ಚಲನವಲನದ ಮಾನದಂಡವಾಗಿ ಬಳಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಶನಿವಾರ ಲಾಕ್‌ಡೌನ್ ವಿಸ್ತರಣೆ ಕುರಿತು ಪ್ರಧಾನಿ ನಡೆಸಿದ ವೀಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ಈ ಸಲಹೆಗೆ ಬೆಂಬಲ ದೊರಕಿದೆ. ಕೊರೋನ ಸೋಂಕು ಪ್ರಕರಣವೇ ದಾಖಲಾಗದ ಜಿಲ್ಲೆಗಳನ್ನು ಹಸಿರು ವಲಯದಲ್ಲಿ ಸೇರಿಸಲಾಗುವುದು. ಇಲ್ಲಿ 400 ಜಿಲ್ಲೆಗಳಲ್ಲಿ ಇದುವರೆಗೆ ಕೊರೋನ ಸೋಂಕಿನ ಪ್ರಕರಣ ದಾಖಲಾಗಿಲ್ಲ.
15ಕ್ಕಿಂತ ಕಡಿಮೆ ಸೋಂಕಿನ ಪ್ರಕರಣ ದಾಖಲಾಗಿರುವ ಮತ್ತು ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗದ ಜಿಲ್ಲೆಗಳನ್ನು ಕಿತ್ತಳೆ ವಲಯದಲ್ಲಿ ಸೇರಿಸಲಾಗುವುದು. ಕಿತ್ತಳೆ ವಲಯದ ವ್ಯಾಪ್ತಿಯ ಪ್ರದೇಶಗಳಲ್ಲಿ ಸೀಮಿತ ಪ್ರಮಾಣದಲ್ಲಿ ಸಂಚಾರ ವ್ಯವಸ್ಥೆಯ ಮರು ಆರಂಭ, ಕೃಷ್ಯುತ್ಪನ್ನಗಳ ಕಟಾವಿಗೆ ಅನುಮತಿ ನೀಡಲಾಗುವುದು.
15ಕ್ಕಿಂತ ಹೆಚ್ಚಿನ ಪ್ರಕರಣ ದಾಖಲಾಗಿರುವ ಪ್ರದೇಶಗಳನ್ನು ಕೆಂಪು ವಲಯದಲ್ಲಿ ಗುರುತಿಸಲಾಗಿದ್ದು ಇಲ್ಲಿ ಎಲ್ಲಾ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿದೆ. ಹಸಿರು ಮತ್ತು ಕಿತ್ತಳೆ ವಲಯದ ಕೆಲವೆಡೆ ಸೀಮಿತ ಪ್ರಮಾಣದಲ್ಲಿ ರೈಲು ಮತ್ತು ದೇಶೀಯ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ.
21 ದಿನಗಳ ಲಾಕ್‌ಡೌನ್(ಎಪ್ರಿಲ್ 14ರವರೆಗಿನ)ನಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಉಂಟಾಗಿದ್ದು ಈ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ದರ ಕೇವಲ 1.5%ದಿಂದ 2.8%ದಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಮೂಲಸೌಕರ್ಯ ಕ್ಷೇತ್ರ ಮತ್ತು ಕೃಷಿ ಕ್ಷೇತ್ರಕ್ಕೆ ಕೆಲವೊಂದು ವಿನಾಯಿತಿ ನೀಡುವ ಸೂಚನೆಯನ್ನು ಶನಿವಾರ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸಂದರ್ಭ ಪ್ರಧಾನಿ ಮೋದಿ ನೀಡಿದ್ದರು.
ಅಲ್ಲದೆ , ಸಾಮಾಜಿಕ ಅಂತರದ ನಿಯಮ ಪಾಲಿಸಿಕೊಂಡು ಯಾವ ಕ್ಷೇತ್ರಗಳಿಗೆ ವಿನಾಯಿತಿ ನೀಡಬಹುದು ಎಂಬ ಪಟ್ಟಿಯನ್ನು ಗೃಹ ಇಲಾಖೆ ಕೇಂದ್ರ ಸರಕಾರದ ಮುಂದೆ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ಆಹಾರ ಸಂಸ್ಕರಣೆ, ವಿಮಾನಯಾನ, ಔಷಧ, ಕೈಗಾರಿಕೆ, ನಿರ್ಮಾಣ ಕಾಮಗಾರಿ ಮುಂತಾದವು ಈ ಪಟ್ಟಿಯಲ್ಲಿದೆ ಎಂದು ವರದಿ ತಿಳಿಸಿದೆ.







