ಕೋವಿಡ್-19 ವಿರುದ್ಧ ಹೋರಾಟ: ಭಾರತದಲ್ಲಿ ಲಕ್ಷದಲ್ಲಿ ಕೇವಲ 12 ಜನರಿಗೆ ಪರೀಕ್ಷೆಗಳು !

ಹೊಸದಿಲ್ಲಿ, ಎ.12: ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಎ.10ರ ವೇಳೆಗೆ 1.5 ಲಕ್ಷ ಜನರನ್ನೂ ತಪಾಸಣೆಗೊಳಪಡಿಸಿರಲಿಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ಗಳು ತಮ್ಮ ರಾಜ್ಯಗಳಲ್ಲಿ 10,000 ಜನರ ಪರೀಕ್ಷೆಗಳನ್ನೂ ನಡೆಸಿರಲಿಲ್ಲ ಎಂದು thequint.com ವರದಿ ಮಾಡಿದೆ.
ಎ.10ರ ವೇಳೆಗೆ ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 6,000 ದಾಟಿತ್ತು ಮತ್ತು 200ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಕೊರೋನ ವೈರಸ್ ನಿಯಂತ್ರಿಸುವಲ್ಲಿ ನಾವು ಅಮೆರಿಕ ಮತ್ತು ಚೀನಾಕ್ಕಿಂತ ಹೆಚ್ಚಿನ ಸಾಧನೆಯನ್ನು ಮಾಡಿದ್ದೇವೆ ಎಂದು ಕೆಲವರು ನಂಬಿದ್ದಾರೆ. ಆದರೆ ಸಾಕಷ್ಟು ಪರೀಕ್ಷೆಗಳನ್ನು ನಡೆಸದೇ ನಾವು ಕೊರೋನ ವೈರಸ್ ವಿರುದ್ಧ ಗೆಲುವನ್ನು ಘೋಷಿಸಬಹುದೇ ಎನ್ನುವುದು ಪ್ರಶ್ನೆಯಾಗಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಮೊದಲ ಕೊರೋನ ವೈರಸ್ ಪ್ರಕರಣ ಜ.30ರಂದು ಪತ್ತೆಯಾಗಿತ್ತು. ಹೆಚ್ಚು ಕಡಿಮೆ ಎರಡು ತಿಂಗಳ ಬಳಿಕ ದೇಶದಲ್ಲಿ ಪಿಡುಗನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಣೆಯಾಗಿತ್ತು. ಫೆಬ್ರವರಿ ಅಂತ್ಯದ ವೇಳೆಗೆ ಕೇವಲ ಮೂರು ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಮಾರ್ಚ್ ಅಂತ್ಯದ ವೇಳೆಗೆ 1,100 ಜನರು ಸೋಂಕಿಗೆ ಗುರಿಯಾಗಿದ್ದರು. ಆ ವೇಳೆಗೆ ಕೇವಲ 38,442 ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಾರ್ಚ್ ತಿಂಗಳೊಂದರಲ್ಲೇ ಸಾವಿರಾರು ಜನರು ಭಾರತಕ್ಕೆ ಮರಳಿದಾಗ 50,000 ಪರೀಕ್ಷೆಗಳನ್ನೂ ನಡೆಸಲಾಗಿರಲಿಲ್ಲ.
ಎರಡು ತಿಂಗಳ ವಿಳಂಬದ ಬಳಿಕ ಪರೀಕ್ಷೆಗಳ ವೇಗವನ್ನು ಹೆಚ್ಚಿಸಲಾದಾಗ ಈ ಸಂಖ್ಯೆಗಳು ತುಂಬ ವಿಭಿನ್ನವಾಗಿದ್ದವು. ಎ.1ರಂದು 1,600 ಪ್ರಕರಣಗಳಿದ್ದು,ಅವರಲ್ಲಿ 38 ಜನರು ಮೃತರಾಗಿದ್ದರು. ಎ.10ಕ್ಕೆ ಆರೋಗ್ಯ ಸಚಿವಾಲಯದ ವೆಬ್‌ಸೈಟ್ 6,000ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಮತ್ತು 200ಕ್ಕೂ ಅಧಿಕ ಸಾವುಗಳನ್ನು ಪ್ರಕಟಿಸಿತ್ತು.
ಭಾರತವು ತನ್ನ ಪ್ರತಿ ಒಂದು ಲಕ್ಷ ಜನರಲ್ಲಿ ಕೇವಲ 12 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ದ.ಕೊರಿಯಾದಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು,ಅಲ್ಲಿ 2.5ಲ.ಕ್ಕೂ ಅಧಿಕ ಜನರು ಪರೀಕ್ಷೆಗೊಳಪಟ್ಟಿದ್ದಾರೆ. ಜರ್ಮನಿಯಲ್ಲಿ 12 ಲ.ಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಟಲಿಯಲ್ಲಿ ಪ್ರತಿ ಒಂದು ಲಕ್ಷಕ್ಕೆ ಸುಮಾರು 1,300 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಪಾಕಿಸ್ಥಾನದಲ್ಲಿಯೂ ಈ ಪ್ರಮಾಣ ಭಾರತಕ್ಕಿಂತ ಹೆಚ್ಚಿದ್ದು, 19 ಜನರ ಪರೀಕ್ಷೆ ನಡೆಸಲಾಗುತ್ತಿದೆ.
ಜನರನ್ನು ತಪಾಸಣೆಗೊಳಪಡಿಸುವುದನ್ನು ವಿಳಂಬಿಸಿರುವ ರಾಷ್ಟ್ರಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ಸೂಪರ್ ಪವರ್ ಆಗಿದ್ದರೂ ಅಮೆರಿಕವು ಪರೀಕ್ಷೆಗಳನ್ನು ನಡೆಸುವಲ್ಲಿ ವಿಳಂಬಿಸಿದ್ದರಿಂದ ಅಲ್ಲಿ ಎ.10ರ ವೇಳೆಗೆ 16,000ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.







