ಪಿಎಂ ಕೇರ್ಸ್ ನಿಧಿಯ ರದ್ದತಿಯನ್ನು ಕೋರಿರುವ ಅರ್ಜಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ಹೊಸದಿಲ್ಲಿ, ಎ.12: ಕೋವಿಡ್-19 ಪಿಡುಗಿನಿಂದ ಉದ್ಭವಿಸಿರುವ ಸ್ಥಿತಿಯನ್ನು ನಿಭಾಯಿಸಲು ಸಾರ್ವಜನಿಕ ದೇಣಿಗೆಗಳನ್ನು ಸ್ವೀಕರಿಸಲು ಪಿಎಂ ಕೇರ್ಸ್ ನಿಧಿ ಸ್ಥಾಪನೆಯ ಕೇಂದ್ರದ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ.
ಹಾಲಿ ಕೊರೋನ ವೈರಸ್‌ನಂತಹ ಯಾವುದೇ ತುರ್ತು ಸಂದರ್ಭ ವನ್ನೆದುರಿಸಲು ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಕೇಂದ್ರವು ಮಾ.28ರಂದು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿತ್ತು.
ನಿಧಿಯ ಸ್ಥಾಪನೆಯನ್ನು ವಿರೋಧಿಸಿ ನ್ಯಾಯವಾದಿ ಎಂ.ಎಲ್.ಶರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಂ.ಎಂ.ಶಾಂತನಗೌಡರ್ ಅವರನ್ನೊಳಗೊಂಡ ಪೀಠವು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಿದೆ.
ಯಾವುದೇ ಅಧ್ಯಾದೇಶ ಅಥವಾ ಗೆಝೆಟ್ ಅಧಿಸೂಚನೆಯಿಲ್ಲದೆ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಅರ್ಜಿದಾರರು ಬೆಟ್ಟು ಮಾಡಿದ್ದು,ಈವರೆಗೆ ನಿಧಿಯಲ್ಲಿ ಸಂಗ್ರಹವಾಗಿರುವ ದೇಣಿಗೆಗಳನ್ನು ಭಾರತದ ಸಂಚಿತ ನಿಧಿಗೆ ವರ್ಗಾಯಿಸುವಂತೆ ಮತ್ತು ನಿಧಿ ಸ್ಥಾಪನೆ ಕುರಿತು ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ.