ಆಸ್ಪತ್ರೆ ಸಿಬ್ಬಂದಿಯಿಂದಾಗಿ ನಾನು ಜೀವಂತ ಇದ್ದೇನೆ: ಜಾನ್ಸನ್

ಲಂಡನ್, ಎ. 12: ನ್ಯಾಶನಲ್ ಹೆಲ್ತ್ ಸರ್ವಿಸ್ ಸಿಬ್ಬಂದಿಯಿಂದಾಗಿ ನಾನು ಈಗ ಜೀವಂತವಾಗಿದ್ದೇನೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ.
ನೋವೆಲ್-ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ 55 ವರ್ಷದ ಜಾನ್ಸನ್, ಮಧ್ಯ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಿಂದ ಹೊರಬಂದ ಬಳಿಕ ನೀಡಿದ ಮೊದಲ ಹೇಳಿಕೆಯಲ್ಲಿ ಈ ರೀತಿ ಹೇಳಿದ್ದಾರೆ.
ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿರುವ ಅವರು ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದರು. ‘‘ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಅವರಿಂದಾಗಿ ನಾನು ಈಗ ಜೀವಂತವಾಗಿದ್ದೇನೆ’’ ಎಂದು ಆಸ್ಪತ್ರೆಯ ಸಿಬ್ಬಂದಿ ಬಗ್ಗೆ ಮಾತನಾಡಿದ ಅವರು ಹೇಳಿದರು.
ಬ್ರಿಟನ್: ದಿನದಲ್ಲಿ 917 ಸಾವು
ಬ್ರಿಟನ್‌ನಲ್ಲಿ ಶನಿವಾರ ಕೊರೋನವೈರಸ್‌ನಿಂದಾಗಿ 917 ಮಂದಿ ಮೃತಪಟ್ಟಿದ್ದಾರೆ ಹಾಗೂ ಇದರೊಂದಿಗೆ ದೇಶದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 10,000ವನ್ನು ಸಮೀಪಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ದೈನಂದಿನ ಪ್ರಕಟನೆ ತಿಳಿಸಿದೆ.
ಅದೇ ವೇಳೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 5,234 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದ ಕೋವಿಡ್-19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 78,991ಕ್ಕೆ ಏರಿದೆ.







