ಈಶಾನ್ಯ ರಾಜ್ಯದವರಿಗೆ ಜನಾಂಗೀಯ ನಿಂದನೆ: ಸೂಕ್ತ ಕ್ರಮಕ್ಕೆ ಪ್ರಧಾನಿಗೆ ಮಣಿಪುರ ಸಿಎಂ ಆಗ್ರಹ

ಇಂಫಾಲ, ಎ.12: ಕೊರೋನ ವೈರಸ್ ಸೋಂಕು ಹರಡುತ್ತಿರುವ ಮಧ್ಯೆಯೇ, ಈಶಾನ್ಯ ರಾಜ್ಯದ ಜನತೆ ದೇಶದ ವಿವಿಧೆಡೆ ಜನಾಂಗೀಯ ನಿಂದನೆಗೆ ಒಳಗಾಗುತ್ತಿದ್ದಾರೆ ಮತ್ತು ಅವರಿಗೆ ಕಿರುಕುಳ ನೀಡಲಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಣಿಪುರ ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಷಯ ಪ್ರಸ್ತಾವಿಸಿದ ಬೀರೇನ್ ಸಿಂಗ್, ದೇಶದ ವಿವಿಧೆಡೆ ಸಿಕ್ಕಿಬಿದ್ದಿರುವ ಮಣಿಪುರದ ಜನತೆ ತಮ್ಮ ಮನೆಗೆ ಹಿಂತಿರುಗಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಲಾಕ್‌ಡೌನ್ ಕಾರಣದಿಂದ ಹೊರರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ 30,000 ಮಣಿಪುರ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಸಿಕ್ಕಿಬಿದ್ದಿರುವ ಇತರ ರಾಜ್ಯಗಳ ಜನರಿಗೆ ಎಲ್ಲಾ ವ್ಯವಸ್ಥೆಗಳನ್ನೂ ತಮ್ಮ ಸರಕಾರ ಮಾಡಿದೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನ ವೈರಸ್ ವಿರುದ್ಧದ ಸಮರಕ್ಕೆ ಸರ್ವ ಸಿದ್ಧತೆ ಪೂರ್ಣಗೊಂಡಿದ್ದು ಕ್ವಾರಂಟೈನ್ ವ್ಯವಸ್ಥೆಗೆ 3,200 ಹಾಸಿಗೆಗಳನ್ನು ಸಿದ್ಧವಾಗಿವೆ. ಎರಡು ಆಸ್ಪತ್ರೆಗಳಲ್ಲಿ ತಲಾ ಒಂದು ವಿಭಾಗವನ್ನು (50 ಹಾಸಿಗೆಯಿರುವ) ಕೊರೋನ ಸೋಂಕಿತರ ಚಿಕಿತ್ಸೆಗೆ ಸಿದ್ಧವಾಗಿರಿಸಲಾಗಿದೆ. ಎರಡೂ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದ್ದು ರಾಜ್ಯದಲ್ಲಿ ಇದುವರೆಗೆ ಒಂದು ಪಾಸಿಟಿವ್ ವರದಿ ಬಂದಿದೆ. ಕೆಲವು ಆಯ್ದ ಖಾಸಗಿ ರೋಗನಿರ್ಣಯ ಕೇಂದ್ರಗಳಲ್ಲಿ ಕೊರೋನ ವೈರಸ್ ಸೋಂಕು ಪರೀಕ್ಷೆ ನಡೆಸಲು ಅನುಮತಿ ಕೋರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.







